ಕಲಬುರಗಿ | ರಾಷ್ಟ್ರ ಮಟ್ಟದ ಶ್ರೇಯಾಂಕದಲ್ಲಿ ಸಿಯುಕೆಯ ಸಾಧನೆ: ಪ್ರೊ.ಬಟ್ಟು ಸತ್ಯನಾರಾಯಣ
ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) 2023-24ನೇ ಶೈಕ್ಷಣಿಕ ವರ್ಷಕ್ಕಾಗಿ ಎನ್ಐಆರ್‌ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು)ನಲ್ಲಿ 150 ರಿಂದ 200 ಶ್ರೇಣಿಯಲ್ಲಿ ಸ್ಥಾನ ಪಡೆದಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಯುಕೆ ಶಿಕ್ಷಕರ ಸಾಧನೆಯ ಹಿನ್ನೆಲೆ, ಶಿಕ್ಷಕರ ಕಠಿಣ ಪರಿಶ್ರಮವನ್ನು ಶ್ಲಾಘಿಸಿ, ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ದಿಕ್ಕುಗಳನ್ನು ನೀಡುವುದಾಗಿದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು. ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ನಾವು ಆಚರಿಸುತ್ತಿದ್ದೇವೆ" ಎಂದು ಅವರು ಹೇಳಿದರು.
“ಶಿಕ್ಷಕರೇ ವಿಶ್ವವಿದ್ಯಾನಿಲಯದ ಬೆನ್ನೆಲುಬು. ಆದರೆ ಈ ಸಾಧನೆಗೆ ತೃಪ್ತಿಪಡದೆ, ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಹೊರಹೊಮ್ಮುವುದು ನಮ್ಮ ಗುರಿ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳು, ಮೂಲಸೌಕರ್ಯ, ಹಳೆಯ ವಿದ್ಯಾರ್ಥಿ ಜಾಲ, ನಿಯೋಜನೆ ಕೋಶ, ಇಂಟರ್ನ್ಶಿಪ್ ಮತ್ತು ಉದ್ಯಮ-ಶೈಕ್ಷಣಿಕ ಸಹಕಾರದ ಮೂಲಕ ನಾವು ಮುಂದುವರಿಯಬೇಕು” ಎಂದರು.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, “ಶಿಕ್ಷಕರು ಯುವಕರನ್ನು ಪರಿವರ್ತಿಸುವ ಶಕ್ತಿಯುಳ್ಳವರು. ಜ್ಞಾನವನ್ನು ಸೃಷ್ಟಿಸುವ ಬ್ರಹ್ಮ, ಸಂರಕ್ಷಿಸುವ ವಿಷ್ಣು, ದುಷ್ಟಶಕ್ತಿಗಳನ್ನು ನಾಶಮಾಡುವ ಮಹೇಶ್ವರರಂತೆ ಗುರು ಸಮಾಜಕ್ಕೆ ಬೆಳಕನ್ನು ನೀಡುತ್ತಾರೆ. ಆದ್ದರಿಂದ ಶಿಕ್ಷಕರಲ್ಲಿ ಜ್ಞಾನ, ಪ್ರಾಮಾಣಿಕತೆ, ಬದ್ಧತೆ ಮತ್ತು ಸಮರ್ಪಣೆ ಎಂಬ ಗುಣಗಳು ಅವಶ್ಯ”ಎಂದು ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಪ್ರೊ.ಎನ್.ಸತ್ಯನಾರಾಯಣ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಶೋಧನೆ, ಪ್ರಕಟಣೆ ಹಾಗೂ ಪುರಸ್ಕಾರಗಳಲ್ಲಿ ಮೆರೆದ ಪ್ರೊ.ಶೇಷನಾಥ ಭೋಸ್ಲೆ, ಡಾ.ಸಂಜೀತ್ ಸರ್ಕಾರ್, ಡಾ.ನುರಸಿಂಗ ಚರಣ್ ಪ್ರಧಾನ್, ಡಾ.ರೋಹಿಣಾಕ್ಷ ಶ್ರೀರ್ಲಾರು, ಪ್ರೊ.ಎಂ.ಎ.ಅಸ್ಲಂ, ಡಾ.ಬಾಬು ಎನ್., ಡಾ.ಜಯದೇವಿ ಜಂಗಮಶೆಟ್ಟಿ, ಡಾ. ರಾಘವೇಂದ್ರ ಬೋನಾಳ್, ಡಾ.ಪಿ.ಎಸ್.ಕಟ್ಟಿಮಣಿ ಅವರನ್ನು ಸನ್ಮಾನಿಸಲಾಯಿತು.
ಪ್ರೊ.ಆರ್.ಎಸ್. ಹೆಗಡಿ ಸ್ವಾಗತಿಸಿ, ಡಾ.ರಾಜೀವ್ ಜೋಶಿ ನಿರೂಪಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ, ಡಾ.ರವಿ ಕಿರಣ್ ನಾಖೋಡ್ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿದರು.
ಪ್ರೊ.ಚನ್ನವೀರ್ ಆರ್.ಎಂ., ಪ್ರೊ.ಜಿ.ಆರ್.ಅಂಗಡಿ, ಪ್ರೊ.ಪರಮೇಶ್, ವಿವಿಧ ನಿಕಾಯಗಳ ಡೀನ್ರು, ವಿಭಾಗಾಧ್ಯಕ್ಷರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.