×
Ad

ಕಲಬುರಗಿ | ಕಲೆ, ಸಾಹಿತ್ಯ, ಸಂಗೀತದಿಂದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಳ : ಡಾ.ಆರ್.ಆರ್. ಬಿರಾದಾರ್‌

Update: 2025-10-11 20:24 IST


ಕಲಬುರಗಿ : ಕಲೆ, ಸಾಹಿತ್ಯ, ಸಂಗೀತದಿoದ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಳವಾಗುವುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಆರ್.ಆರ್.ಬಿರಾದಾರ್‌ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ್‌ ಪಾಟೀಲ್‌ ತೇಗಲತಿಪ್ಪಿ ಹಾಗೂ ಕಲಾವಿದ ಡಾ. ರೆಹಮಾನ್ ಪಟೇಲ್ ಅವರ ಸಂಪಾದಕತ್ವದ ಚಿತ್ರಕಲಾವಿದರ ಪರಿಚಯಾತ್ಮಕ ದೃಶ್ಯಕಲಾ ಸಿರಿ ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ, ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸ ಪರಂಪರೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಶರಣರು, ಸಂತರು ಮತ್ತು ಸೂಫಿ ಸಂತರ ನಾಡಿನಲ್ಲಿ ಸಾಮರಸ್ಯ, ಸಂತೃಪ್ತಿ ಜೀವನ ಕಂಡು ನನಗೆ ಖುಷಿಯಾಗಿದೆ. ಈ ನೆಲದ ಕಲಾವಿದರು ಕನಸುಗಾರರಿದ್ದಂತೆ. ಬದುಕಿನ ವಿವಿಧ ಆಯಾಮಗಳ ಕುರಿತು ಕಲೆಯ ಮೂಲಕ ಅನಾವರಣಗೊಳಿಸುವ ಶಕ್ತಿ ಕಲಾವಿದರಲ್ಲಿದೆ. ಬರುವ ದಿನಗಳಲ್ಲಿ ಅನ್ನದ ಭಾಷೆಯನ್ನು ಪ್ರೀತಿಸಿ ಅನುಷ್ಠಾನಗೊಳಿಸಬೇಕು. ನಮ್ಮ ಮಾಹಿತಿ ಆಯೋಗದಿಂದ ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದೇವೆ. ಮಾತೃ ಭಾಷೆ ನಿರಂತರವಾಗಿ ಅಳವಡಿಸಿಕೊಂಡು ಬೆಳೆಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ್‌ ಪಾಟೀಲ್‌ ತೇಗಲತಿಪ್ಪಿ, ಇಂದಿನ ಹೊಸ ಪೀಳಿಗೆಯನ್ನು ಸಾಹಿತ್ಯದತ್ತ ಆಕರ್ಷಿತರಾಗುವಂತೆ ಪ್ರೇರಣೆ ಕೊಡುವ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಪರಿಷತ್ತು ಮಾಡುತ್ತಿದೆ. ಪ್ರತಿಯೊಬ್ಬರಲ್ಲೂ ಅಭೂತಪೂರ್ವವಾದ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಬೆಳೆಸುವ ಜವಾಬ್ಧಾರಿ ಸಮಾಜದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮೇಲಿದೆ. ಕನ್ನಡ ಭವನದ ಕಲಾ ಸೌಧದಲ್ಲಿ ಕಲಾವಿದರ ಪರಿಚಯದ ಜತೆಗೆ ಅವರ ಚಿತ್ರಗಳೂ ಸಹ ಸಾಮಾಜಿಕ ಪರಿವರ್ತನೆಯ ಮೇಲೆ ಮಾತನಾಡುತ್ತಿವೆ ಎಂದರು. ಪರಿಷತ್ ನಿಂದ ಜಿಲ್ಲೆಯಲ್ಲಿ ದಾಖಲೀಕರಣ ಆಗುವ ಅನೇಕ ಮಹತ್ವದ ಮತ್ತು ಮೌಲಿಕ ಕೃತಿಗಳನ್ನು ಹೊರ ತರಲಾಗುತ್ತಿದೆ ಎಂದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ.ಜೆ.ಎಸ್. ಖಂಡೇರಾವ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೃತಿ ಸಂಪಾದಕ ಡಾ.ರೆಹಮಾನ್ ಪಟೇಲ್, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಝೀರುದ್ದಿನ್ ಮುತ್ತವಲ್ಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ ವೇದಿಕೆ ಮೇಲಿದ್ದರು. ವಿಶ್ವಖ್ಯಾತ ಚಿತ್ರಕಲಾವಿದ ಮಹಮ್ಮದ್‌ ಅಯಾಝೋದ್ದೀನ್ ಪಟೇಲ್ ಕೃತಿ ಪರಿಚಯಿಸಿದರು.

ಪ್ರಮುಖರಾದ ಡಾ.ಬಿ.ಎ.ಪಾಟೀಲ್‌, ಸಿದ್ಧಲಿಂಗ ಬಾಳಿ, ಅಮೃತಪ್ಪ ಅಣೂರ, ಬಾಬುರಾವ್‌ ಪಾಟೀಲ, ರಾಘವೇಂದ್ರ ಬುರ್ಲಿ, ಶೇಖರ ಬ್ಯಾಕೋಡ, ಬಸವರಾಜ ತೋಟದ್, ಡಾ.ಎ.ಎಸ್. ಪಾಟೀಲ, ಡಾ. ಶಿವನಂದ ಭಂಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News