Kalaburagi | ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನಕ್ಕೆ ಆಗ್ರಹ
ಕಲಬುರಗಿ: ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡುವುದರ ಜೊತೆಗೆ, ನಿಗಮವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಿ ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಒತ್ತಾಯಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ, ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
ಹಿಂದಿನ ಸರ್ಕಾರದ ಅವಧಿಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿ ನಿಗಮ ರಚನೆಯಾದರೂ, ಅಗತ್ಯ ಪ್ರಮಾಣದಲ್ಲಿ ಅನುದಾನ ದೊರೆಯದಿರುವುದರಿಂದ ನಿಗಮದ ಉದ್ದೇಶ ಈಡೇರಿಲ್ಲ. ಹೀಗಾಗಿ 100 ಕೋಟಿ ರೂ. ಅನುದಾನ ಒದಗಿಸಿ, ನಿಗಮದ ಮೂಲಕ ಸಮಾಜದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಸಮಾಜದ ಕಾಯಕ ಬಂಧುಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ತರಬೇತಿ, ಸಾಲ ಹಾಗೂ 15,000 ರೂ. ಮೌಲ್ಯದ ಟೂಲ್‌ಕಿಟ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ರಘು ಕೌಟಿಲ್ಯ ಅವರು, ಹಡಪದ ಅಪ್ಪಣ್ಣ ಸಮಾಜ ಸೇರಿದಂತೆ ವಿವಿಧ ಕಾಯಕ ಸಮಾಜಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಈರಣ್ಣ ಹಡಪದ ಸಣ್ಣೂರ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಸಹ ಶಿಕ್ಷಕರು ಕಿರಣಗಿ, ರಾಜ್ಯ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್., ಜಿಲ್ಲಾ ಸಹ ಕಾರ್ಯದರ್ಶಿ ಮಹಾದೇವ ಹಡಪದ ರಾವೂರ, ಸುನೀಲ್ ಕುಮಾರ್ ಹಡಪದ ಭಾಗಹಿಪ್ಪರರ್ಗಾ, ವಿನೋದ ಅಂಬಲಗಾ, ಜೇವರ್ಗಿ ತಾಲೂಕು ಅಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ, ಸೋಮಶೇಖರ ಹಡಪದ ನರಿಬೋಳ, ಯಡ್ರಾಮಿ ತಾಲೂಕು ಅಧ್ಯಕ್ಷ ಡಾ. ಅಶೋಕ ಯಲಗೋಡ, ಮಲ್ಲಿಕಾರ್ಜುನ ಹಡಪದ ಕುಳಗೇರಾ, ನಿಂಗಣ್ಣ ಹಡಪದ ಸುಂಬಡ, ರಾಮು ಹಡಪದ ಹಂಗರಗಿ, ಮಲ್ಲಿಕಾರ್ಜುನ ಹಡಪದ ಯಡ್ರಾಮಿ, ಶಹಾಬಾದ ತಾಲೂಕು ಅಧ್ಯಕ್ಷ ಸಿದ್ರಾಮ ಹಡಪದ ಯಾಗಾಪೂರ, ಭೀಮಾಶಂಕರ ಹಡಪದ ಚಿತ್ತಾಪುರ, ನಾಗರಾಜ ಹಡಪದ ಸಾತನೂರ, ತೋಟೇಂದ್ರ ಹಡಪದ ಶಹಾಬಾದ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.