Chitapur | ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ನಾಗಯ್ಯ ಹಿರೇಮಠ
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಯಶಸ್ವಿಗೊಳಿಸಲು ಅಧಿಕಾರಿಗಳೊಂದಿಗೆ ತಾಲೂಕಿನ ಎಲ್ಲ ಸಮಾಜದ ಮುಖಂಡರು, ಭಕ್ತಾಧಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ್ ನಾಗಯ್ಯ ಹಿರೇಮಠ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವ (ಜಾತ್ರಾ ಮಹೋತ್ಸವ)ದ ಪ್ರಯುಕ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನಾನು ಕೇವಲ ಅಧಿಕಾರಿಯಲ್ಲ, ಒಬ್ಬ ದೇವಿಯ ಭಕ್ತ. ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗುವುದು” ಎಂದು ಹೇಳಿದರು.
ಪಲ್ಲಕ್ಕಿ ಉತ್ಸವಕ್ಕೆ ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಭಕ್ತಾಧಿಗಳಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನಕ್ಕೆ ತೆರಳುವ ರಸ್ತೆಯ ಎರಡೂ ಬದಿಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರು ಹಾಗೂ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಸೂಚಿಸಿದರು. ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಬೆಂಕಿ ಅನಾಹುತ ಸಂಭವಿಸದಂತೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾತ್ರೆಗೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ವಿಶೇಷ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ಬಸ್ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು. ಅಕ್ರಮ ಮದ್ಯ ಮಾರಾಟ ನಡೆಯದಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಭೀಮಣ್ಣ ಕರದಳ್ಳಿ, ಮಲ್ಲರೆಡ್ಡಿ ಗೋಪಸೇನ್ ಹಾಗೂ ಈರಪ್ಪ ಭೋವಿ ಮಾತನಾಡಿ, ನಾಗಾವಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಟಿಪ್ಪರ್‌ಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಭಕ್ತಾಧಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿ ಮಾಡಬೇಕು. ವಿದ್ಯುತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮಾತನಾಡಿ, ಪುರಸಭೆಗೆ ವಹಿಸಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು ಎಂದರು. ಸಿಪಿಐ ಎಸ್.ಸಿ. ಪಾಟೀಲ ಹಾಗೂ ಪಿಎಸ್‌ಐ ಮಂಜುನಾಥ ರೆಡ್ಡಿ ಮಾತನಾಡಿ, ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರತ್ನಾಕರ ನಾಯಕ ಮಾತನಾಡಿ, ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿ ಎಲ್ಲರೂ ಸಹಕರಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಮುಖಂಡರಾದ ಚಂದ್ರಶೇಖರ್ ಅವಂಟಿ, ವಿಠಲ್ ಕಟ್ಟಿಮನಿ, ನರಸಪ್ಪ ಭೋವಿ, ಶರಣಪ್ಪ ಕೋರವಾರ, ಅಂಬಾದಾಸ್ ತುರೆ, ಭಾಸ್ಕರ್ ಪುಣೆ, ಶರಣಪ್ಪ ನಾಟೀಕಾರ ಹಾಗೂ ಸುರೇಶ್ ಬೆನಕನಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ನಾಗರೆಡ್ಡಿ ಗೋಪಸೇನ್, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸುರೇಶ್ ಅಳ್ಳೋಳ್ಳಿ, ಲಕ್ಷ್ಮೀಕಾಂತ್ ತಾಂಡೂರಕರ್, ಶಿವಾಜಿ ಕಾಶಿ, ರಾಮಲಿಂಗ ಬಾನರ್, ಶಿವಕಾಂತ್ ಬೆಣ್ಣೂರಕರ್, ಸಾಬಣ್ಣ ಹೊಳಿಕಟ್ಟಿ, ಭೀಮರಾಯ ಹೊತಿನಮಡಿ, ಶ್ರೀನಿವಾಸ ಪಾಸ್ಮೆ, ಮಹೇಶ್ ಕಾಶಿ, ರಾಮು ಹರವಾಳ, ನಾಗೇಂದ್ರ ಬುರ್ಲಿ, ಸಂಜಯ್ ಬುಳಕರ್, ಬಸವರಾಜ ಮುಡಬೂಳಕರ್ ಸೇರಿದಂತೆ ಸಿಬ್ಬಂದಿಗಳಾದ ಅಶ್ವತ್ಥ ನಾರಾಯಣ, ಮೈನೋದ್ದಿನ್, ಮಂಜುನಾಥ, ಮಾರ್ಥಂಡ ಮುಡಬೂಳ ಹಾಗೂ ಶಂಕರ್ ಸೇರಿದಂತೆ ಇತರರು ಇದ್ದರು.
ಸಂಗಮೇಶ ನಿರೂಪಿಸಿದರು. ಗ್ರೇಡ್-2 ತಹಶೀಲ್ದಾರ್ ರಾಜಕುಮಾರ್ ಮರತೂರಕರ್ ವಂದಿಸಿದರು.