Kalaburagi | ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಖೇಲೋ ಇಂಡಿಯಾ ಕ್ರೀಡಾಪಟುಗಳ ಗಮನಾರ್ಹ ಸಾಧನೆ
ಕಲಬುರಗಿ: ಉಪನಿರ್ದೇಶಕರ ಆಡಳಿತ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಖೇಲೋ ಇಂಡಿಯಾ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದು, ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಶ್ರೀನಿವಾಸ್ 800 ಮೀಟರ್ ಓಟ ಹಾಗೂ 400 ಮೀಟರ್ ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪುರವ್ 600 ಮೀಟರ್ ಓಟದಲ್ಲಿ ಪ್ರಥಮ ಹಾಗೂ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜಗದೀಶ್ 400 ಮೀಟರ್ ಹರ್ಡಲ್ಸ್‌ನಲ್ಲಿ ಹಾಗೂ ರಿಯಾಜ್ 110 ಮೀಟರ್ ಹರ್ಡಲ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕೈಲಾಸ್ 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಸಮರ್ಥ್, ಆಕಾಶ್, ಮೇಘರಾಜ್ ಹಾಗೂ ಸಿದ್ದಾರ್ಥ ಅವರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ಬಾಲಕಿಯರ ವಿಭಾಗದಲ್ಲಿಯೂ ಖೇಲೋ ಇಂಡಿಯಾ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿದೀಶಾ 600 ಮೀಟರ್ ಹಾಗೂ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸೋನಾಕ್ಷಿ 1500 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಸಾವಿತ್ರಿ 3 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಸೃಷ್ಟಿ ಎಸ್.ಪಿ. ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. 4x400 ಮೀಟರ್ ರಿಲೇಯಲ್ಲಿ ಕಾವೇರಿ, ಕೀರ್ತಿ, ವಿದ್ಯಾಶ್ರೀ ಹಾಗೂ ಸೃಷ್ಟಿ ಅವರ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಖೇಲೋ ಇಂಡಿಯಾ ಕ್ರೀಡಾಪಟುಗಳ ಈ ಸಾಧನೆಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತರಬೇತುದಾರರು, ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ.