Kalaburagi | ಸೋಲಾರ್ ಕಂಪನಿ ವಿರುದ್ಧ ಎಫ್‌ಐಆರ್‌ಗೆ ಆಗ್ರಹ
ರೈತರ ಮೇಲೆ ಹಲ್ಲೆ ಆರೋಪಿಸಿ ಜಿಲ್ಲಾಧಿಕಾರಿಗೆ ಮನವಿ
ಕಲಬುರಗಿ : ಆಳಂದ ತಾಲೂಕಿನ ರೈತರ ಜಮೀನು ಖರೀದಿ ಹಾಗೂ ಲೀಜ್ ಪ್ರಕ್ರಿಯೆಯಲ್ಲಿ ಅನ್ಯಾಯ ನಡೆದಿದ್ದು, ರೈತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ 7 ಪ್ರೈವೇಟ್ ಲಿಮಿಟೆಡ್ (ಬ್ಲೂಪಿನ್ ಎನರ್ಜಿ) ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 13ರಂದು ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ನ್ಯಾಯ ದೊರಕಿಸದೆ, ಅವರೊಂದಿಗೆ ಅವಾಚ್ಯ ಶಬ್ದಗಳಿಂದ ವರ್ತಿಸಿರುವ ಆರೋಪದ ಹಿನ್ನೆಲೆಯಲ್ಲಿ ಮದನ್ ಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್‌ಐ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಂಪನಿಯು ಖರೀದಿಸಿರುವ ಜಮೀನಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು, ಅಂದರೆ ಪ್ರತಿ ಎಕರೆಗೆ ₹22 ಲಕ್ಷ ಪರಿಹಾರ ನೀಡಬೇಕು. ಜಮೀನು ಮಾರಾಟ ಮಾಡಿದ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು. ಲೀಜ್‌ಗೆ ಪಡೆದಿರುವ ಜಮೀನಿಗೆ ಪ್ರತಿ ಎಕರೆಗೆ ವಾರ್ಷಿಕ 50 ಸಾವಿರ ರೂ. ಬಾಡಿಗೆ ನೀಡಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಕಂಪನಿಯು ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಹಾಗೂ ಗ್ರಾಮ ಮತ್ತು ಜಮೀನು ಸಂಪರ್ಕ ರಸ್ತೆಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಮಹಾಂತೇಶ್ ಎಸ್ ಜಮಾದಾರ್, ವಿಠಲ್ ಮಾಕಗೌಡ್ರು, ಕಮಲಬಾಯಿ ಸಜ್ಜನ, ಸಂಗಣಬಸವ ಘಂಟೆ, ರವಿಕಾಂತ್ ಸಕರಗಿ, ಸುರೇಂದ್ರ ಪಾಟೀಲ್, ಸಂಜುಮಾರ್ ಮಂಠಾಳೆ, ಶಿವಯ್ಯ ಸ್ವಾಮಿ, ಮಲ್ಲಿನಾಥ್, ಶ್ರೀಶೈಲ್ ಗೋಳಾ, ಮಲ್ಲಿನಾಥ್ ಧೂಗೊಂಡ ಸೇರಿದಂತೆ ಅನೇಕರು ಇದ್ದರು.