ಕಲಬುರಗಿ: ಗುಲಬರ್ಗಾ ದೂರದರ್ಶನ ಕೇಂದ್ರ ಹಾಗೂ ಆಕಾಶವಾಣಿ ಕೇಂದ್ರಗಳನ್ನು ಉಳಿಸಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ನಿಯೋಗ ಆಗ್ರಹಿಸಿದೆ.

ಬೆಂಗಳೂರಿನ ದೂರದರ್ಶನ ಕೇಂದ್ರ ಚಂದನದ ಉಪನಿರ್ದೇಶಕ ಎಲ್. ಗುರುರಾಜ ಅವರು ಗುಲಬರ್ಗಾ ದೂರದರ್ಶನ ಕೇಂದ್ರಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ ಅವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ಕಲ್ಯಾಣ ಕರ್ನಾಟಕ ಭಾಗದ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಗಳು, ಕೃಷಿ ಕ್ಷೇತ್ರದ ಮಾಹಿತಿ ಹಾಗೂ ಸ್ಥಳೀಯ ಪ್ರತಿಭೆಗಳ ಚಟುವಟಿಕೆಗಳಿಗೆ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು. ಈ ಕೇಂದ್ರಗಳನ್ನು ಉಳಿಸುವುದರ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಬೇಕು ಎಂದು ನಿಯೋಗ ಒತ್ತಾಯಿಸಿತು.

ಸಿಬ್ಬಂದಿ ಕೊರತೆಯಿಂದ ಅನಾಥ ಸ್ಥಿತಿಯಲ್ಲಿರುವ ದೂರದರ್ಶನ ಕೇಂದ್ರದ ಒಳಭಾಗದಲ್ಲಿ ಇಲಿಗಳು ಹಾಗೂ ಹುಳುಗಳ ಕಾಟದಿಂದ ದುರ್ವಾಸನೆ ಹರಡುತ್ತಿದೆ. ಕೇಂದ್ರದ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಈ ಭಾಗದ ಸಾರ್ವಜನಿಕ ಪ್ರಸಾರ ಸೇವೆಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಶೋಚನೀಯ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವಿಷಯದ ಬಗ್ಗೆ ತಕ್ಷಣ ಗಮನಹರಿಸಿ, ಕಲಬುರಗಿ ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರಗಳನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಭೀಮಣ್ಣ ಬೋನಾಳ, ನಾರಾಯಣ ಎಂ. ಜೋಶಿ, ಬಿ.ಎಂ. ರಾವುರ, ಡಿ.ಪಿ. ಸಜ್ಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor