ಕಲಬುರಗಿ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಆಯೋಗದ ಶಿಫಾರಸಿನಂತೆ ಭೀಮಾ ನದಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ, ಅಫಜಲಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ಬೃಹತ್ ಪಾದಯಾತ್ರೆ ನಡೆಸಿದರು.

ಅಫಜಲಪುರ ತಾಲೂಕಿನ ಅಳ್ಳಗಿ (ಬಿ) ಗ್ರಾಮದಿಂದ ಬುಧವಾರ ಆರಂಭವಾದ ಪಾದಯಾತ್ರೆ ಶುಕ್ರವಾರ ಬೆಳಗ್ಗೆ ಕಲಬುರಗಿ ನಗರ ತಲುಪಿತು. ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಸಾಗಿದ ಪಾದಯಾತ್ರೆ ಜಗತ್ ವೃತ್ತದಲ್ಲಿ ಸಂಪನ್ನಗೊಂಡಿತು. ನೂರಾರು ರೈತರು ಹಸಿರು ಶಾಲುಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಉಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಹರಿಸುವುದು, ಕೆರೆ ಹಾಗೂ ಕಾಲುವೆಗಳಿಗೆ ನೀರು ಒದಗಿಸುವುದು ಮತ್ತು ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಲೆ ನಿಗದಿಪಡಿಸುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ರೈತರು ದೇಶದ ಬೆನ್ನೆಲುಬಾಗಿದ್ದು, ರೈತರಿಲ್ಲದೆ ಯಾರ ಬದುಕೂ ಸಾಧ್ಯವಿಲ್ಲ. ಬರಗಾಲದಿಂದ ಕಲಬುರಗಿ ಜಿಲ್ಲೆ, ವಿಶೇಷವಾಗಿ ಅಫಜಲಪುರ ತಾಲೂಕು ತತ್ತರಿಸಿದ್ದು, ಜಾನುವಾರುಗಳಿಗೂ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಉಜನಿ ಜಲಾಶಯದಿಂದ 15 ಟಿಎಂಸಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಲೆ ನಿಗದಿಪಡಿಸುವ ಮೂಲಕ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ ಮಾತನಾಡಿ, ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಹರಿಸುವ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಕುರಿತು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಫಜಲಪುರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕಬ್ಬು ಬೆಳೆಯುತ್ತಿದ್ದು, ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಅಫಜಲಪುರದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗಿದೆ. ರೈತರ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದು ಹೇಳಿದರು.

ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಉಜನಿ ಜಲಾಶಯದಿಂದ ನಮಗೆ ಬರಬೇಕಾದ ನೀರಿನ ಪಾಲು ಸಿಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಸೀನಾ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸಿರುವುದರಿಂದ ಬಚಾವತ್ ಆಯೋಗದ ತೀರ್ಪಿನ ಪ್ರಕಾರ ನಮಗೆ ಸಲ್ಲಬೇಕಾದ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಈ ಕುರಿತು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರದ ಕಾರಣ ರೈತರು ಪಾದಯಾತ್ರೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಭಿನವ ಪುಂಡಲಿಂಗ ಮಹಾರಾಜರು, ಕೈಲಾಸಲಿಂಗ ಶಿವಾಚಾರ್ಯರು, ಅಭಿನವ ಗುರು ಬಸವ ಶಿವಾಚಾರ್ಯರು, ರೈತ ಮುಖಂಡರಾದ ಶಂಕರ ಮ್ಯಾಕೇರಿ, ರಜಾಕ್ ಪಟೇಲ್, ರಮೇಶ ಪಾಟೀಲ್, ಚಂದ್ರಶೇಖರ ಕರಜಗಿ, ಚಿದಾನಂದ ಹಿರೇಮಠ, ಶಾಂತು ಅಂಜುಟಗಿ, ದೇವಣ್ಣ ಕಿರಸಾವಳಗಿ, ಶರಣಬಸಪ್ಪ ಮಮಶೆಟ್ಟಿ, ಮುರುಘೇಂದ್ರ ಮಸಳಿ, ಗುರು ಚಾಂದಕವಟೆ, ನಾಗರಾಜ ಬುಜರಿ, ನೂರ ಅಹ್ಮದ್ ಬಾಗವಾನ, ಸಿದ್ದು ಮಗಿ, ಮಲ್ಲಿಕಾರ್ಜುನ ನಿಂಗದಳ್ಳಿ, ಬಸಣ್ಣ ಗುಣಾರಿ, ಶಿವಪುತ್ರಪ್ಪ ಸಂಗೋಳಗಿ, ಅಪ್ಪಾಶ ಕಣ್ಣಿ ಹಾಗೂ ಅಬ್ಬಾಸಲಿ ನದಾಫ್ ಸೇರಿದಂತೆ ಹಲವು ರೈತರು ಮತ್ತು ಮುಖಂಡರು ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor