ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಕಳೆದ ಒಂದು ವರ್ಷದಲ್ಲಿ 188 ದಿನಗಳ ಕಾಲ ವಿಚಾರಣೆ ನಡೆಸಿ 3,694 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಮಾಹಿತಿ ನೀಡದ 80 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಒಟ್ಟು 7.78 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದರು.

ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ನಗರದ ಮಹಲ್-ಎ-ಶಾಹಿ ಅತಿಥಿಗೃಹದ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 7,262 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. 35 ಮೇಲ್ಮನವಿದಾರರಿಗೆ 96 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ವಿಧಿಸಲಾದ ದಂಡದ ಮೊತ್ತದಲ್ಲಿ 7.37 ಲಕ್ಷ ರೂ. ವಸೂಲಿಯಾಗಿದೆ ಎಂದು ತಿಳಿಸಿದರು.

ಕಲಬುರಗಿ ಪೀಠದಲ್ಲಿ ಒಟ್ಟು 20,398 ಪ್ರಕರಣಗಳು ದಾಖಲಾಗಿದ್ದು, ಈವರೆಗೆ 13,468 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 6,930 ಪ್ರಕರಣಗಳು ಬಾಕಿ ಇವೆ. ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು 2,059 ಪ್ರಕರಣಗಳು ಬಾಕಿ ಇದ್ದರೆ, ಕಲಬುರಗಿಯಲ್ಲಿ 1,483, ಬಳ್ಳಾರಿಯಲ್ಲಿ 885 ಹಾಗೂ ಬೀದರ್‌ನಲ್ಲಿ 560 ಪ್ರಕರಣಗಳು ಬಾಕಿ ಉಳಿದಿವೆ ಎಂದರು.

ಕಲಬುರಗಿ ಪೀಠದ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಪೀಠಕ್ಕೆ ಶಾಶ್ವತ ಕಟ್ಟಡ ಹಾಗೂ ಹೆಚ್ಚುವರಿ ಸಿಬ್ಬಂದಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳನ್ನು ಸಾರ್ವಜನಿಕ ಪ್ರಾಧಿಕಾರಗಳೆಂದು ಪರಿಗಣಿಸಿ ಆಯೋಗ ಆದೇಶಿಸಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ವಿಳಂಬ ಮಾಡಿದ ಮೂವರು ಪೊಲೀಸ್ ಉಪನಿರೀಕ್ಷಕರಿಗೆ (ಪಿಎಸ್‌ಐ) ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂದು ವೆಂಕಟಸಿಂಗ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor