Kalaburagi | ಕೃಷಿ ಕ್ಷೇತ್ರದ ಪ್ರಗತಿಗೆ ಮಹಿಳೆಯರ ಸಬಲೀಕರಣ ಅಗತ್ಯ: ಡಾ.ಬಿ.ಎಂ.ದೊಡ್ಮನಿ
ಕಲಬುರಗಿ: ಬೀಜ ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೆ ಕೃಷಿಯ ಪ್ರತಿಯೊಂದು ಹಂತದಲ್ಲೂ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರನ್ನು ನವೀನ ತಂತ್ರಜ್ಞಾನಗಳ ಮೂಲಕ ಸಬಲೀಕರಣಗೊಳಿಸುವುದು ಕೃಷಿಯ ಪ್ರಗತಿಗೆ ಪೂರಕವಾಗಿದೆ ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಕಲಬುರಗಿಯ ಡೀನ್ ಡಾ. ಬಿ.ಎಂ. ದೊಡ್ಮನಿ ಹೇಳಿದರು.
ನಗರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕೃಷಿನಿರತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ರಾಜು ಜಿ. ತೆಗ್ಗಳ್ಳಿ ಮಾತನಾಡಿ, ರೈತ ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಗೆ ಕೃಷಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಲಭ್ಯವಿರುವ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಮಹಿಳೆಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನಿಂದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ಶಾಣಮ್ಮ, ಜಿಲ್ಲಾ ಮಟ್ಟದ ಉತ್ತಮ ಕೃಷಿಸಖಿ ಪ್ರಶಸ್ತಿ ಪಡೆದ ಮಾದನಹಿಪ್ಪರಗಾದ ಕನ್ಯಾಕುಮಾರಿ, ತರಕಾರಿ ಬೇಸಾಯದಲ್ಲಿ ಸಾಧನೆ ಮಾಡುತ್ತಿರುವ ಅಂಬಿಕಾ, ಕೃಷಿಸಖಿಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸ್ವತಃ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ವಿಜಯಲಕ್ಷ್ಮಿ ಹಾಗೂ ಮೊಳಕೆಕಾಳುಗಳ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿರುವ ಕಲಬುರಗಿಯ ಅರ್ಚನಾ ಹಲಚೇರಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಯುಸುಫ್ ಅಲಿ ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ., ಡಾ. ರಾಹುಲ್ ಹಾಗೂ ಎಂ.ಸಿ. ಪಾಟೀಲ್ ಸೇರಿದಂತೆ ಸಿಬ್ಬಂದಿ ವರ್ಗದವರಾದ ನಾಗಣ್ಣ, ಶಶಿಕಲಾ, ನಾಗೀಂದ್ರ ಬಡದಾಳಿ, ಗಣೇಶ್ ಭೋಲೆ, ನಿರಂಜನ್ ಧನ್ನಿ, ಸೈದಪ್ಪ ನಾಟಿಕಾರ್, ಉಮಾಕಾಂತ್, ಮಹೇಶ್ ಹೂಗಾರ್, ವಿಜಯಕುಮಾರ್, ಸ್ವಾಮಿ ಹಾಗೂ ಉಷಾ ಉಪಸ್ಥಿತರಿದ್ದರು. ಕೃಷಿ ಮಹಾವಿದ್ಯಾಲಯ, ರಾಯಚೂರಿನ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.