ಕಲಬುರಗಿ: ವೈಜ್ಞಾನಿಕ ಪದ್ಧತಿ ಹಾಗೂ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿ, ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೈನು ವಿಜ್ಞಾನ ಮಹಾವಿದ್ಯಾಲಯದ ಡೀನ್ ಡಾ. ಸತೀಶ್‌ಚಂದ್ರ ಬಿರಾದಾರ ಹೇಳಿದರು.

ನಗರದ ಮಹಾಗಾಂವ್ ಕ್ರಾಸ್‌ನಲ್ಲಿರುವ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಆಧುನಿಕ ಹೈನುಗಾರಿಕೆಗೆ ಸೂಕ್ತ ತಳಿಗಳ ಆಯ್ಕೆ, ಸುಸ್ಥಿರ ಹೈನುಗಾರಿಕೆ, ಜಾನುವಾರುಗಳ ವಸತಿ ನಿರ್ವಹಣೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ವೈಜ್ಞಾನಿಕ ಪೋಷಣೆ ಹಾಗೂ ಮೇವಿನ ಬೆಳೆಗಳ ಉತ್ಪಾದನೆ ಕುರಿತು ಐಡಿಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಎನ್.ಬಿ. ಮರಾಠೆ ಸೇರಿದಂತೆ ತಜ್ಞರು ಮಾಹಿತಿ ನೀಡಿದರು.

ತರಬೇತಿಯ ಎರಡನೇ ದಿನ ಹಾಲಿನ ಕಲಬೆರಕೆ ಪತ್ತೆಹಚ್ಚುವ ವಿಧಾನಗಳು, ಹೈನು ಉದ್ಯಮಕ್ಕೆ ಅಗತ್ಯವಾದ ಉಪಕರಣಗಳು, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಸಮಗ್ರ ತೋಟಗಾರಿಕೆಯಲ್ಲಿ ಹೈನುಗಾರಿಕೆಯ ಮಹತ್ವ ಕುರಿತು ಉಪನ್ಯಾಸ ನೀಡಲಾಯಿತು. ಹಾಲಿನ ಉತ್ಪನ್ನಗಳ ತಯಾರಿಕೆ ಮತ್ತು ಶುದ್ಧ ಹಾಲಿನ ಉತ್ಪಾದನೆಯಲ್ಲಿ ಸೂಕ್ಷ್ಮಾಣುಜೀವಿಗಳ ಪಾತ್ರದ ಕುರಿತು ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿತ್ತು.

ಶಿಬಿರಾರ್ಥಿಗಳಾದ ಕಾಶಿನಾಥ, ವೃಥೇಂದ್ರರೆಡ್ಡಿ ಮತ್ತು ರಾಜ್‌ಕುಮಾರ ಅವರು ತರಬೇತಿಯಿಂದ ನೂತನ ತಂತ್ರಜ್ಞಾನಗಳ ಕುರಿತು ತಿಳಿದುಕೊಳ್ಳಲು ಸಾಧ್ಯವಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ವೃಥೇಂದ್ರರೆಡ್ಡಿ ಅವರು ಹೊಸ ಹೈನುಗಾರಿಕೆ ಘಟಕ ಸ್ಥಾಪಿಸುವ ಆಸಕ್ತಿ ವ್ಯಕ್ತಪಡಿಸಿದರೆ, ಈಗಾಗಲೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರಾಜ್‌ಕುಮಾರ ಅವರು ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಸ್ಥಾಪನೆಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳ 50 ರೈತರು ಭಾಗವಹಿಸಿದ್ದರು. ತರಬೇತಿ ಕಾರ್ಯಕ್ರಮದ ಸಂಯೋಜಕ ಅಕ್ಷಯಕುಮಾರ ಅವರಿಗೆ ಶಿಬಿರಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor