Kalaburagi | ಸೇವಾನಿರತ ಶಿಕ್ಷಕರಿಗೆ TET ಕಡ್ಡಾಯ ರದ್ದುಪಡಿಸಲು ಒತ್ತಾಯ
ಕಲಬುರಗಿ: ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾನೂನು ರೂಪಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.), ಬೆಂಗಳೂರು, ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ ಗಂಗು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರೆಪ್ಪ ಡಿ. ಹೊಸಮನಿ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆ ಹಾಗೂ TET ಮಾರ್ಗಸೂಚಿಗಳು ಜಾರಿಗೆ ಬರುವುದಕ್ಕೂ ಮುನ್ನ ಕಾನೂನುಬದ್ಧವಾಗಿ ನೇಮಕಗೊಂಡ ಶಿಕ್ಷಕರಿಗೆ ನಂತರ ಜಾರಿಯಾದ ಅರ್ಹತಾ ನಿಯಮಗಳನ್ನು ಹಿಂದಿನ ದಿನಾಂಕದಿಂದ ಅನ್ವಯಿಸಬಾರದು ಎಂದು ಒತ್ತಾಯಿಸಲಾಗಿದೆ.
ಸೇವಾನಿರತ ಶಿಕ್ಷಕರ ಸೇವಾ ಹಕ್ಕು, ಉದ್ಯೋಗ ಭದ್ರತೆ, ವೇತನ, ಪಿಂಚಣಿ ಹಾಗೂ ಬಡ್ತಿ ಅವಕಾಶಗಳಿಗೆ ಯಾವುದೇ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ, ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಘಟನೆಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಸೇವಾನಿರತ ಶಿಕ್ಷಕರಿಗೆ ನ್ಯಾಯಸಮ್ಮತ ಹಾಗೂ ಮಾನವೀಯ ಪರಿಹಾರ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂದು ಸಂಘದ ಪದಾಧಿಕಾರಿಗಳು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹುಸೇನ್ ಪಾಶ, ಬಸ್ಸಮ್ಮ, ನಂದಿನಿ, ಪರಮೇಶ್ವರ ಓಕಳಿ, ಅಶೋಕ ಸೊನ್ನ, ಸಂಗಣ್ಣ ಜಾಬ, ಪರಮೇಶ್ವರ್ ದೇಸಾಯಿ, ಸಾಗರ್, ಸಂತೋಷ್, ಸಂಗು ಎಂ, ಚನ್ನಬಸಪ್ಪ ದೇಸಾಯಿ, ಮಹಿಬೂಬ್ ಮಡಿಕಿ, ರಬ್ಬಾನಿ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು ಶಿಕ್ಷಕರು ಇದ್ದರು.