×
Ad

ಕಲಬುರಗಿ | ದುಷ್ಚಟಗಳಿಗೆ ಯುವಜನಾಂಗ ದಾಸರಾಗಬಾರದು : ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್

Update: 2025-11-19 19:42 IST

ಕಲಬುರಗಿ: ಇಂದಿನ ಯುವಜನಾಂಗ ಯಾವುದೇ ದುಷ್ಚಟಗಳಿಗೆ ದಾಸರಾಗಬಾರದು, ತಂಬಾಕಿನಲ್ಲಿ ನಿಕೋಟಿನ್‌ ಅಂಶವಿದ್ದು, ಆರೋಗ್ಯದ ಮೇಲೆ ವ್ಯತ್ತಿರಿಕ್ತ ದುಷ್ಪರಿಣಾಮವನ್ನು ಬೀರುವ ಕಾರಣದಿಂದ ಯಾರು ಕೂಡ ತಂಬಾಕು ಸೇವನೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಹೇಳಿದರು.

ಬುಧುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎನ್.ಎಸ್.ಎಸ್. ಘಟಕ ಕಲಬುರಗಿ ಇದರ ಸಂಯುಕ್ತಾಶ್ರಯದಲ್ಲಿ “ತಂಬಾಕು ಮುಕ್ತ ಯುವ ಪೀಳಿಗೆ ಅಭಿಯಾನ 3.0” ಕಾರ್ಯಕ್ರಮವನ್ನು ಜ್ಯೋತಿ ಬೆೆಳಗಿಸಿವುದರ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ತಂಬಾಕು ಸೇವನೆಯು ತಡೆಗಟ್ಟಬಹುದಾದ ರೋಗಗಳು ಮತ್ತು ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವರ್ಷಕ್ಕೆ 13.5 ಲಕ್ಷ ಸಾವುಗಳು ಸಂಭವಿಸುತ್ತಿದ್ದು, ತಂಬಾಕು ಸೇವನೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ತೊಂದರೆ ಮತ್ತು ಅಕಾಲಿಕ ಮರಣಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಸರಕಾರದ ಆದೇಶದಂತೆ ಶಾಲಾ ಕಾಲೇಜುಗಳ 100ಮೀ ಅಂತರದಲ್ಲಿ ತಂಬಾಕು ಮತ್ತುಅದರ ಉಪ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಅಂತಹ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣಕೋಶದ ಅಧಿಕಾರಿಗಳು ದಾಳಿಯನ್ನು ಮಾಡಿ ಕ್ರಮ ಕೈಗೊಳ್ಳಬೇಕೆಂದರು.

ತಂಬಾಕು ಮುಕ್ತ ಯುವ ಅಭಿಯಾನ 3.0 ಎಂಬುದು ಭಾರತ ಸರ್ಕಾರದ 60 ದಿನಗಳ ರಾಷ್ಟ್ರವ್ಯಾಪ್ತಿ ಕಾರ್ಯಕ್ರಮವಾಗಿದ್ದು, ಯುವಜನರು ತಂಬಾಕು ಬಳಸುವುದನ್ನು ತಡೆಗಟ್ಟಲು ಮತ್ತು ತ್ಯಜಿಸಲು ಬಯಸುವವರನ್ನು ಬೆಂಬಲಿಸಲು ಇದನ್ನು ಪ್ರಾರಂಭಿಸಲಾಗಿದೆ. ಇದು ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳಲ್ಲಿ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಭಾರ ಪ್ರಾದೇಶಿಕ ನಿರ್ದೇಶಕ ಡಾ. ಶುಭಾಂಗಿ ದಿಗಂಬರ್‌ ಚಿಕಟೆ ಮಾತನಾಡಿ, ಆರೋಗ್ಯವೇ ಭಾಗ್ಯ ಎನ್ನುವಂತೆ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ತಮ್ಮಆರೋಗವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ರಾಕೇಶ್‌ ಕಾಂಬಳೆ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕ್ಯಾನ್ಸರ್‌ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶಾಂತಲಿಂಗ ನಿಗ್ಗುಡಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಕಾಲು ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಸಂಧ್ಯಾ ಕಾನೇಕರ್, ವಿಟಿಯು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಸಂಜಯ ಪಟ್ಟಣ ಶೆಟ್ಟಿ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತ ಪಾಟೀಲ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಪ್ರಾದೇಶಿಕ ಕೇಂದ್ರ ಕಲಬುರಗಿಯ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಟಿಯು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಪಕ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News