ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಪ್ರಕರಣ ದಾಖಲು
ಆರೋಪಿ ಸಿದ್ದು ಪಾಟೀಲ್ ಕಾಮಣಿ
ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ ಆರೋಪದ ಮೇರೆಗೆ ಸೇಡಂ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಸೇಡಂ ಪಟ್ಟಣದ ನಿವಾಸಿ ಸಿದ್ದು ಪಾಟೀಲ್ ಕಾಮಣಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ, “ನೀವು ನಿಮ್ಮ ಧ್ವನಿ ಎತ್ತಿದ್ದಕ್ಕಾಗಿ ಜೈಲು ಪಾಲಾಗುವ ಮತ್ತು ಅತ್ಯಾಚಾರಿಯು ಜಾಮೀನು ಪಡೆಯುವ ವಿಕಸಿತ ಭಾರತಕ್ಕೆ ಸ್ವಾಗತ” ಎಂಬ ಅರ್ಥದ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಅನ್ನು ಸಂತೋಷ್ ಕುಮಾರ್ ರಂಜೋಳ ಎಂಬವರು ಶೇರ್ ಮಾಡಿದ್ದರು. ಅದೇ ಪೋಸ್ಟ್‌ಗೆ ಸಿದ್ದು ಪಾಟೀಲ್ ಕಾಮಣಿ ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಾಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಾ.ಅಂಬೇಡ್ಕರ್ ಸೇವಾ ಸಮಿತಿಯ ಕರ್ನಾಟಕದ ಸೇಡಂ ತಾಲೂಕು ಅಧ್ಯಕ್ಷ ಈಶ್ವರಾಜ್ ರಂಗವಾರ ಅವರು ನೀಡಿರುವ ದೂರಿನ ಮೇರೆಗೆ ಸೇಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.