ಜೇವರ್ಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಲೆಯ ಮೇಲೆ ಕಲ್ಲು ಹೊತ್ತು ಅನಿರ್ಧಿಷ್ಟಾವಧಿ ಧರಣಿ
ಜೇವರ್ಗಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ನೇತೃತ್ವದಲ್ಲಿ ಜೇವರ್ಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ತಾಲೂಕು ಪಂಚಾಯತ್ ಕಚೇರಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಿತು.
ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕಾರಿಗಳಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ರೈತರು ತಲೆಯ ಮೇಲೆ ಸೈಜುಗಲ್ಲುಗಳನ್ನು ಹೊತ್ತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಎಲ್ಲಾ ರೈತರಿಗೆ ಬೆಳೆ ಪರಿಹಾರ ಧನ ಹಾಗೂ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕವಾಗಿ ಕೆಲಸ ಒದಗಿಸಬೇಕು, ತೊಗರಿಗೆ ಕನಿಷ್ಠ 12,000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಜೊತೆಗೆ 2005ರ ಉದ್ಯೋಗ ಖಾತ್ರಿ ಕಾಯ್ದೆಗೆ ವಿಬಿ ಜಿ ರಾಮ್‌ಜಿ ಮೂಲಕ ಮಾಡಲಾದ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ರೈತರು ಒತ್ತಾಯಿಸಿದರು.
ಧರಣಿಯಲ್ಲಿ ತಾಲೂಕು ಅಧ್ಯಕ್ಷ ಸುಭಾಷ್ ಹೊಸಮನೆ, ಕಾರ್ಯದರ್ಶಿ ರೇವು ನಾಯಕ್, ಜಾಧವ್ ಮಲ್ಕಪ್ಪ ಹರನೂರ್ (ಕೋರ್ಕೂರು), ಬಸವರಾಜ ನಡುವಿನಕೆರೆ, ಸಿದ್ದಪ್ಪ ಹಂಗರಗಿ, ನಿಂಗಣ್ಣ, ಶ್ರೀಕಾಂತ್ ದಾಸರ್, ಉಸ್ಮಾನ್ ಅಲಿ ಇನಾಮದಾರ, ಸಕ್ರಪ್ಪ ಮ್ಯಾಗೇರಿ, ಭೀಮರಾಯ ದಾಸರ, ಸಿದ್ದಣ್ಣ ಅದ್ವಾನಿ, ರಮೇಶ್ ಬಂದ್ರವಾಡ, ಗುರಪ್ಪ ಮುಖ, ರಾಜು ಸಾತ್ಕೇಡ, ಈರಣ್ಣ ರಾಥೋಡ್, ಯಲ್ಲಾಲಿಂಗ ತಳವಾರ್, ಬಸವರಾಜ ಅನ್ನೊರು, ಮಹಾಂತೇಶ್ ನಾಯ್ಕೋಡಿ, ಮಲ್ಲಿಕಾರ್ಜುನ್ ಹೊಸಮನಿ, ಲಕ್ಷ್ಮಣ್ ಕವಾಲ್ದಾರ್, ಬಾಲರಾಜ್ ಕೋಟೆ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.