×
Ad

ಕಲಬುರಗಿ | ಜಂಟಿ ಸದನದಲ್ಲಿ ಮಾತನಾಡದ ರಾಜ್ಯಪಾಲರ ನಡೆ, ಅಸಂವಿಧಾನಿಕ: ಸಿಪಿಎಂ ಖಂಡನೆ

Update: 2026-01-22 19:07 IST

ಕಲಬುರಗಿ: ರಾಜ್ಯ ಸರ್ಕಾರ ಕರೆದಿದ್ದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ತಮ್ಮದೇ ಮಾತುಗಳನ್ನು ಹೇಳಿ ನಿರ್ಗಮಿಸಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ನಡೆ ಅಸಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಪ್ರತಿವರ್ಷದ ಮೊದಲ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಂತ್ರಿಮಂಡಲ ಸಿದ್ಧಪಡಿಸಿದ ಭಾಷಣವನ್ನು ಓದಬೇಕೆಂದು ಸಂವಿಧಾನದ ಕಲಂ 176 ಸ್ಪಷ್ಟವಾಗಿ ತಿಳಿಸುತ್ತದೆ. ಆದರೆ ರಾಜ್ಯಪಾಲರು ಇದನ್ನು ಪಾಲಿಸದೆ ಸಂವಿಧಾನಬಾಹಿರವಾಗಿ ವರ್ತಿಸಿರುವುದು ಸರ್ವಾಧಿಕಾರತ್ವದ ಮನೋಭಾವವನ್ನು ತೋರಿಸುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ರಾಜ್ಯಪಾಲರುಗಳು ತಾವು ರಾಜ್ಯ ಸರ್ಕಾರದ ಪ್ರತಿನಿಧಿಗಳೆಂಬುದನ್ನು ಮರೆತು, ಕೇಂದ್ರ ಸರ್ಕಾರದ ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಂತೆ ವರ್ತಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರಗಳೊಂದಿಗೆ ನಿರಂತರವಾಗಿ ತಿಕ್ಕಾಟ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಒಕ್ಕೂಟವಾದಿ ಸ್ವರೂಪವನ್ನು ಬಲಪಡಿಸುವ ಬದಲು, ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನದಲ್ಲಿದೆ. ಇದು ಸಂವಿಧಾನದ ಮೌಲ್ಯಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News