×
Ad

ಕಲಬುರಗಿ | ಕ್ರೀಡೆಗಳಲ್ಲಿ ಗೆಲುವು ಸಾಧಿಸಲು ಶಿಸ್ತು, ಸಮಯ ಮುಖ್ಯ : ಡಾ.ಪಂಡಿತ್

Update: 2026-01-22 19:11 IST

ಕಲಬುರಗಿ : ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಲು ಶಿಸ್ತು ಮತ್ತು ಸಮಯ ಪಾಲನೆ ಬಹಳ ಮುಖ್ಯ ಎಂದು ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಂಡಿತ್ ಬಿ.ಕೆ. ಅವರು ಅಭಿಪ್ರಾಯಪಟ್ಟರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಸಂಘ ಸಂವಿಧಾನ ದಿನಾಚರಣೆ ಅಂಗವಾಗಿ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಂವಿಧಾನ ಪ್ರೀಮಿಯರ್ ಲೀಗ್-2026 ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಆರನೇ ದಿನದ ಪಂದ್ಯಾವಳಿಗೆ ಟಾಸ್ ಮಾಡಿ ಮಾತನಾಡಿ, ಶಿಸ್ತು ಮತ್ತು ಸಮಯ ಪಾಲನೆಯಿಂದ ನಿಮ್ಮ ಪ್ರತಿಭೆಗೆ ಯಶಸ್ಸು ಸಿಗಲಿದೆ. ಆತ್ಮಸ್ಥೈರ್ಯ, ದೈಹಿಕ ಸದೃಢತೆ ಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳಿಗೆ ನವಚೈತನ್ಯ ಬರುತ್ತದೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮತ್ತು ಪ್ರತಿಭೆ ಪ್ರದರ್ಶನಕ್ಕೆ ಸಮಾನ ಆದ್ಯತೆ ನೀಡಬೇಕು. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಛಲದಿಂದ ಪ್ರಯತ್ನಿಸಿದಾಗ ಬಹುಮುಖ ವ್ಯಕ್ತಿತ್ವದೊಂದಿಗೆ ಸಾಧಕನಾಗಿ ಬೆಳೆಯಬಹುದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ಸರ್ವರಿಗೂ ಸಮಾನ ಅವಕಾಶ ನೀಡಿದೆ. ಅವರ ಜೀವನ ಮತ್ತು ಚಿಂತನೆ ನಮ್ಮಲ್ಲರಿಗೂ ಮಾರ್ಗ ತೋರಿಸುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಗಳನ್ನು ಪ್ರತಿ ಗ್ರಾಮೀಣ ಪ್ರದೇಶಗಳ ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಅಳವಡಿಸಿದರೆ ಸಾಲದು ಸಂವಿಧಾನದ ಮಹತ್ವ ಮತ್ತು ಹೋರಾಟದ ಜೀವನವನ್ನು ಪ್ರತಿಯೊಬ್ಬರ ಮನ ಮತ್ತು ಮನೆಗೂ ತಲುಪಿಸಬೇಕು. ಅವರ ಹೆಸರಿನಲ್ಲಿ ಈ ಪಂದ್ಯಾವಳಿ ನಡೆದಿರುವುದು ಹೆಮ್ಮೆ ಎನಿಸಿದೆ. ಮುಂದೆಯೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಕ್ರೀಡೆ, ಕಾರ್ಯಾಗಾರ, ಸಮ್ಮೇಳನ, ವಿಚಾರ ಸಂಕಿರಣ ಆಯೋಜನೆ ಮಾಡುವ ಕೆಲಸವಾಗಲಿ ಎಂದು ಆಶಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಅರುಣ ಕುಮಾರ ಕುರ್ನೆ ಮಾತನಾಡಿದರು.

ಡಾ.ವಿಜಯಕುಮಾರ ಬೀಳಗಿ, ಡಾ.ಶಂಭುನಾಥ ನಡಗೇರಿ, ಡಾ.ಸೂಲಬಾಯಿ ಹಿತವಂತ, ಡಾ.ಪಲ್ಲವಿ, ಡಾ.ಅಭಯಕುಮಾರ್ ಪೋತೆ ಮುಂತಾದವರಿದ್ದರು.

ಜ.17 ರಿಂದ ಆರಂಭವಾದ ಸಂವಿಧಾನ ಪ್ರೀಮಿಯರ್ ಲೀಗ್-2026 ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ತಂಡಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಮೊದಲ ಸುತ್ತಿನ ಲೀಗ್ ಪಂದ್ಯದಲ್ಲಿ ಒಟ್ಟು 29 ತಂಡಗಳು ಪ್ರದರ್ಶನ ನೀಡಿದವು. ಸೆಮಿಫೈನಲ್ ಪಂದ್ಯದಲ್ಲಿ 19 ಪುರುಷ ತಂಡಗಳು, 10 ಮಹಿಳಾ ತಂಡಗಳು ಪ್ರದರ್ಶನ ನೀಡಲಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News