ಆಳಂದ | ವಿಕಸಿತ ಭಾರತ ಗುರಿ ಸಾಧನೆಗೆ ಹಾರ್ಡ್ ಹಾಗೂ ಸಾಫ್ಟ್ ಸ್ಕಿಲ್ಸ್ ಅಗತ್ಯ : ಪ್ರೊ.ಬಿರಾದಾರ್
ಆಳಂದ: ಕಠಿಣ (ಹಾರ್ಡ್ ಸ್ಕಿಲ್ಸ್) ಮತ್ತು ಮೃದು (ಸಾಫ್ಟ್ ಸ್ಕಿಲ್ಸ್) ಕೌಶಲ್ಯಗಳು ಇಂದಿನ ಆರ್ಥಿಕತೆಯ ಪ್ರಮುಖ ಚಾಲಕ ಶಕ್ತಿಗಳಾಗಿದ್ದು, ವಿಕಸಿತ ಭಾರತ ಗುರಿ ಸಾಧನೆಗೆ ಅವು ಅತ್ಯವಶ್ಯಕವಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಹೇಳಿದರು.
ಬೆಂಗಳೂರಿನ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿಗಾಗಿ ಕಾರ್ಯನಿರ್ವಹಿಸುತ್ತಿರುವ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆಯೋಜಿಸಿದ್ದ ಮೂರು ದಿನಗಳ ಮೃದು ಕೌಶಲ್ಯ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತವು ಕೌಶಲ್ಯಗಳ ಜಾಗತಿಕ ರಾಜಧಾನಿಯಾಗುವತ್ತ ವೇಗವಾಗಿ ಸಾಗುತ್ತಿದೆ. ಆದರೆ ಪ್ರಸ್ತುತ ಯುವಕರಲ್ಲಿ ಕೇವಲ ಶೇ.20 ರಷ್ಟು ಮಾತ್ರ ಔಪಚಾರಿಕ ಕೌಶಲ್ಯ ಪಡೆದಿದ್ದು, ಸುಮಾರು ಶೇ.45 ಯುವಕರು ನಿರುದ್ಯೋಗಿಗಳಾಗಿರುವುದು ಆತಂಕಕಾರಿ ಅಂಶವಾಗಿದೆ ಎಂದು ಅವರು ಹೇಳಿದರು.
ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಡೀನ್ ಪ್ರೊ. ಪಾಂಡುರಂಗ ವಿ. ಪತ್ತಿ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ಕಾರ್ಯಕ್ರಮದಲ್ಲಿ ಕಲಿತ ಕೌಶಲ್ಯಗಳನ್ನು ನಿಮ್ಮ ವೃತ್ತಿಜೀವನ ನಿರ್ಮಾಣಕ್ಕೆ ಬಳಸಿಕೊಂಡು ವಿಕಸಿತ ಭಾರತ ನಿರ್ಮಾಣಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ತರುಣ ಮತ್ತು ಶ್ರೀಲಕ್ಷ್ಮಿ ನಿರೂಪಿಸಿದರು. ಭಾಗ್ಯಶ್ರೀ ಸ್ವಾಗತಿಸಿದರು. ಶ್ರೀಕರ್ ಗೌಡ ವಂದಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ. ಶುಷ್ಮಾ ಸೇರಿದಂತೆ ಡಾ. ಸಫಿಯಾ ಪರ್ವೀನ್, ಡಾ. ಮಹೇಂದ್ರ ಜಿ, ಡಾ. ಎಂ. ಜೋಹೈರ್, ಡಾ. ರೇಖಾ, ಡಾ. ಪೂಜಿತಾ, ಪ್ರೊ. ದೇವರಾಜಪ್ಪ, ಡಾ. ಗಣಪತಿ ಬಿ. ಸಿನ್ನೂರು, ಡಾ. ರಂಗನಾಥ್, ಡಾ. ಜಗದೀಶ್, ಡಾ. ಸೈಲಾಜ್ ಕೊನೆಕ್ ಹಾಗೂ ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.