ಕಲಬುರಗಿ: ದ್ಬೇಶದಿಂದ ವೈರತ್ವ ನಾಶವಾಗುವುದಿಲ್ಲ, ಪ್ರೀತಿಯಿಂದ ಮಾತ್ರ ವೈರತ್ವ ನಾಶವಾಗುವುದು ಎಂದು ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ಸಂಸ್ಥಾಪಕರಾದ ಪೂಜ್ಯ ಬಂತೆ ಶಾಕು ಬೋಧಿಧಮ್ಮ ಹೇಳಿದರು.

ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಭಾರತ, ಗ್ಲೋಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್ ಯುಎಸ್‌ಎ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂಘ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆ ಸನ್ನತಿ (ಕನಗನಹಳ್ಳಿ) ಆಶ್ರಯದಲ್ಲಿ ರವಿವಾರ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಜರುಗಿದ ಕರ್ನಾಟಕ ಧಮ್ಮಾ ಜನಜಾಗೃತಿ ಯಾತ್ರೆಯ ಸಂಪನ್ನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಾನಸಿಕ ಗುಲಾಮಗಿರಿ ಎಂಬುದು ಮನುಷ್ಯನ ಸ್ವತಂತ್ರ ಆಲೋಚನೆ, ವಿವೇಚನೆ ಮತ್ತು ಪ್ರಶ್ನಿಸುವ ಹಕ್ಕನ್ನು ಕಸಿದುಕೊಂಡು, ಅಂಧಶ್ರದ್ಧೆಯೊಂದಿಗೆ ವ್ಯವಸ್ಥೆಯೊಂದಕ್ಕೆ ಕುರುಡಾಗಿ ಶರಣಾಗುವಂತೆ ಮಾಡುವ ಸ್ಥಿತಿಯಾಗಿದೆ. ಬೌದ್ಧ ಧರ್ಮದ ಮೂಲ ತತ್ವಗಳ ಪ್ರಕಾರ, ಇಂತಹ ಮಾನಸಿಕ ಗುಲಾಮಗಿರಿಗೆ ಬುದ್ಧನ ವೈಚಾರಿಕತೆ ಮಾತ್ರ ಚಿಕಿತ್ಸೆ ನೀಡಬಲ್ಲದು ಎಂದು ಹೇಳಿದರು.

26 ದಿನಗಳ ಕಾಲ ರಾಜ್ಯಾದ್ಯಂತ ಯಾತ್ರೆ ನಡೆದಿದ್ದು, ಜನರಿಂದ ಅದ್ಭುತ ಬೆಂಬಲ ವ್ಯಕ್ತವಾಗಿದೆ. ಬೌದ್ಧ ಧರ್ಮದ ಅನುಯಾಯಿಗಳು ಸನಾತನ ಧರ್ಮದ ಸಂಕೋಲೆಗಳಿಂದ ಮುಕ್ತರಾಗಲು ಹೆಣಗಾಡುತ್ತಿದ್ದಾರೆ. ದೈನಂದಿನ ಜೀವನದಲ್ಲಿ ಸನಾತನ ಧರ್ಮದ ಅಂಧಶ್ರದ್ದೆಗಳು ನಮ್ಮನ್ನು ಮುನ್ನಡೆಸುತ್ತಿವೆ. ಮಾನಸಿಕ ಗುಲಾಮಗಿರಿ ನಮ್ಮನ್ನು ಆಳಲು ನಾವು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.

ಸನ್ನತಿಯಲ್ಲಿ ಬೌದ್ಧ ವಿಶ್ವವಿದ್ಯಾಲಯ, ಸಂಶೋಧನೆ ಕೇಂದ್ರ ನಿರ್ಮಿಸಿ ಇಡೀ ಪ್ರದೇಶವನ್ನು ಜಗತ್ತು ಆಕರ್ಷಿಸುವಂತೆ ಮಾಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಪ್ರಮುಖರಾದ ಸುರೇಶ ಹಾದಿಮನಿ, ಮರಿಯಪ್ಪ ಚಟ್ಟರಕರ, ಅರುಣಕುಮಾರ, ರಾಹುಲ್ ಹಳಿಮನಿ, ಸಂದೀಪ ಕಟ್ಟಿ, ಮಲ್ಲಪ್ಪ ಹೊಸ್ಮನಿ, ಬಸವರಾಜ ಬೆಣ್ಣೂರ, ಸೂರ್ಯಕಾಂತ ರದ್ದೆವಾಡಿ, ಶರಣಬಸ್ಸು ಶಿರೂರಕರ, ಶ್ರೀಕಾಂತ ಶಿಂಧೆ, ಸಾಬಣ್ಣ ಬನ್ನಟ್ಟಿ, ನ್ಯಾಯವಾದಿ ಸಂದೀಪ ಕುಮಾರಸಿಂಗ್, ವಿನಯ ಬಂಬೋಲೆ, ಗುರುಪಾದ ದೊಡ್ಡಮನಿ, ಆನಂದ ಟೈಗರ, ಮಲ್ಲಿಕಾರ್ಜುನ ಬೆಣ್ಣೂರ, ಮರಿಯಪ್ಪ ಬುಕ್ಕಾ, ಮಾರುತಿ ಕಂಠಿ, ಸುರೇಶ ನಿಂಬಾಳಕರ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಉಪಾಸಕ, ಉಪಾಸಕಿಯರು ಪಾಲ್ಗೊಂಡಿದ್ದರು.

ಸುರೇಶ ಹಾದಿಮನಿ, ಮಲ್ಲಪ್ಪ ಹೊಸ್ಮನಿ ಇತರರು ದ್ವಜಾರೋಹಣ ನೇರವೇರಿಸಿದರು. ನೀಲಕಂಠ ಬಡಿಗೇರ, ಮಾರುತಿ ಕಂಠಿ ಪ್ರಾರ್ಥಿಸಿದರು, ಭಾಗಪ್ಪ ಯಾದಗಿರಿ ರಾಜು ಸಂಕಾ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor