×
Ad

ಕಲಬುರಗಿ | ಎನ್.ರವಿಕುಮಾರ್‌ರನ್ನು ಬಂಧಿಸುವಂತೆ ಆಗ್ರಹಿಸಿ ಜೂ.2ರಂದು ಧರಣಿ ಸತ್ಯಾಗ್ರಹ: ಅರ್ಜುನ್ ಭದ್ರೆ

Update: 2025-05-28 20:12 IST

ಕಲಬುರಗಿ : ಜಿಲ್ಲಾಧಿಕಾರಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ, ಬಂಧಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದನ ಒಂದು ಚಿಂತಕರ ಚಾವಡಿ ಇದ್ದ ಹಾಗೆ, ಅಂತಹ ಸದನದ ಬಿಜೆಪಿ ಪಕ್ಷದ ಸದಸ್ಯ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸದಸ್ಯ ಎನ್.ರವಿಕುಮಾರ್ ಕಲಬುರಗಿಗೆ ಬಂದು ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುವುದು ಸರಿಯಲ್ಲ, ಎನ್.ರವಿಕುಮಾರ್ ಅವರು ಜಿಲ್ಲಾಧಿಕಾರಿಗಳನ್ನು ಪಾಕಿಸ್ತಾನದಿಂದ ಬಂದಿರುವಂತೆ ಕಾಣುತ್ತೆ ಎನ್ನುವ ಮೂಲಕ ಅವರನ್ನು ಅವಮಾನ ಮಾಡಿದ್ದಾರೆ. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದರು.

ಡಿಸಿ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಎನ್.ರವಿಕುಮಾರ್ ವಿರುದ್ಧ ಈಗಾಗಲೇ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಕೂಡಲೇ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದಲ್ಲಿ ಜೂ.2 ರಂದು ನಗರದ ಜಗತ್ ವೃತ್ತದ ಬಳಿ ಒಂದು ದಿವಸದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ನಿರ್ವಹಣಾ ಪದ್ಧತಿಯ ಮೂಲಕ ಗಮನ ಸೆಳೆದ ಜಿಲ್ಲಾಧಿಕಾರಿಗಳು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಕ್ಷ ಅಧಿಕಾರಿಯಾಗಿದ್ದು, ಅಂತಹ ಅಧಿಕಾರಿಯ ವಿರುದ್ಧ ಇಂತಹ ಹೇLಈಕೆ ನೀಡುವುದು ಅಪರಾಧ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮರಿಯಪ್ಪ ಹಳ್ಳಿ, ಮಲ್ಲಿಕಾರ್ಜುನ್ ಕ್ರಾಂತಿ, ಸಂತೋಷ್ ತೆಗನೂರ್, ಎಂ.ಎಂ.ಮೇತ್ರೆ, ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಅಜಾದಪೂರ, ಜಯಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News