×
Ad

ಕಲಬುರಗಿ | ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಚಿವರ ಮನೆ ಮುಂದೆ ಧರಣಿ

Update: 2025-03-02 19:17 IST

ಕಲಬುರಗಿ : ಹಾಸ್ಟೆಲ್ ಹಾಗೂ ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ಜಿಲ್ಲಾ ಸಮಿತಿಯಿಂದ ಸಚಿವರ, ಶಾಸಕರ ಮನೆ ಮುಂದೆ ಧರಣಿ ನಡೆಸಿ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಕಳೆದ 15 ರಿಂದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್, ಕಂಪ್ಯೂಟರ್‌ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ ಗಳು, ಹೊರಗುತ್ತಿಗೆ ಶಿಕ್ಷಕರು, ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ. ಗುತ್ತಿಗೆದಾರರು, ವಾರ್ಡನ್ ಗಳು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ ಶೋಷನೆ ಮಾಡುತ್ತಿದ್ದಾರೆ. ಹಾಗಾಗಿ ಹೊರಗುತ್ತಿಗೆ ಸಿಬ್ಬಂದಿಗಳ ಬಗ್ಗೆ ಬಜೆಟ್ ಅಧಿವೇಶನದಲ್ಲಿ ಚರ್ಚೆ ಮಾಡಿ ಹೊರಗುತ್ತಿಗೆ ಸಿಬ್ಬಂದಿಗಳಿಗಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ತಿಂಗಳಿಗೆ ಕನಿಷ್ಠ ವೇತನ ಮಾಸಿಕ 31 ಸಾವಿರ ರೂ. ಕೊಡಬೇಕು. ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕಾಯಂ ಮಾಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂ ಮಾಡಲು ರಾಜ್ಯ ಸರಕಾರ ಹೊಸದಾಗಿ ಕಾನೂನು ಜಾರಿ ಮಾಡಬೇಕು. ಬೀದರ್ ಮಾದರಿಯಲ್ಲಿ ಸಹಕಾರ ಸಂಘದ ಸೊಸೈಟಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಮಾಡಬೇಕು ಎಂದರು.

ನಿವೃತ್ತಿ ಸೇವಾ ಭದ್ರತೆ, ನಿವೃತ್ತಿ ನಂತರ ಜೀವನ ನಿರ್ವಹಣೆಗೆ ಇಂಡಿಗಂಟು 10 ಲಕ್ಷ ರೂ. ಪಾವತಿಸಬೇಕು. ಹಾಸ್ಟೆಲ್‍ಗಳಿಗೆ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ವಾಪಸ್ ಪಡೆದು, ಹಿಂದಿನಂತೆ 50 ಮಕ್ಕಳಿಗೆ 3 ಜನ ಸಿಬ್ಬಂದಿಗಳು ಇರಬೇಕು. 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ಸೇರಿಸಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ, ಜಿಲ್ಲಾಧ್ಯಕ್ಷ ಪರಶುರಾಮ ಹಡಗಲಿ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ನಾಗರತ್ನ ಮದನಕರ, ಕಲ್ಯಾಣಿ ಪೂಜಾರಿ, ಬಾಬು ಹೊಸಮನಿ, ನರಸಮ್ಮ, ನರಸಮ್ಮ ಕೊಂಡಂಪಳ್ಳಿ, ರೇಣುಕಾ ಸಂಗೋಳಗಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹೊರಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News