ಕಲಬುರಗಿ | ಜಿಲ್ಲಾಧಿಕಾರಿಗಳಿಂದ ಜೇವರ್ಗಿ ತಾಲ್ಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ
ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮಂಗಳವಾರ ಜೇವರ್ಗಿ ತಾಲೂಕಿಗೆ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಸ್ತುತ ಮಳೆಗಾಲ ಇರುವುದರಿಂದ ತಾಲೂಕಿನ ಭೀಮಾ ನದಿಗೆ ಹೆಚ್ಚಿನ ನೀರು ಬಂದಲ್ಲಿ ನದಿ ದಂಡೆಯ ಗ್ರಾಮದಲ್ಲಿ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುವುದರಿಂದ ಪ್ರವಾಹ ಪರಿಸ್ಥಿತಿ ಅನುಗುಣವಾಗಿ ಕೆಲಸ ನಿರ್ವಹಿಸಲು ಈಗಿನಿಂದಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಆಗಸ್ಟ್ ಎರಡನೇ ವಾರದಲ್ಲಿನ ಸತತ ಮಳೆಯಿಂದ ಹಾಳಾಗಿರುವ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ನಿಖರ ವರದಿ ಸಲ್ಲಿಸಬೇಕೆಂದ ಜಿಲ್ಲಾಧಿಕಾರಿಗಳು, ಅಧಿಕಾರಿ-ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದು, ನೆರೆ ಹಾವಳಿ ಕೆಲಸ ಕಾರ್ಯಗಳನ್ನು ಪ್ರಥಮಾದ್ಯತೆ ಮೇಲೆ ಮಾಡುವಂತೆ ಸೂಚಿಸಿದರು.
ಇದಕ್ಕೂ ಮುನ್ನ ಮಾರ್ಗ ಮಧ್ಯೆ ಕೋಟನೂರ(ಡಿ) ಗ್ರಾಮದಲ್ಲಿ ಕೃಷಿಯೇತರ ಭೂಮಿ ಪರಿವರ್ತನೆಯ ಪ್ರಸ್ತಾವನೆಯ ಜಮೀನು ಪರಿಶೀಲಿಸಿದರು. ಇದಲ್ಲದೆ ಫರತಾಬಾದ್ ಗ್ರಾಮದಲ್ಲಿ ಸಿ.ಎಲ್.7 ಮದ್ಯದ ಲೈಸೆನ್ಸ್ ಮಂಜೂರಾತಿ ನೀಡುವ ಸಂಬಂಧ ಸ್ಥಳ ಪರಿಶೀಲಿಸಿದರು.
ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ, ಕಲಬುರಗಿ ತಹಶೀಲ್ದಾರ್ ಕೆ.ಆನಂದಶೀಲ, ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೂಂಡ ಸೇರಿದಂತೆ ಇತರೆ ಅಧಿಕಾರಿ-ಸಿಬ್ಬಂದಿಗಳಿದ್ದರು.