×
Ad

ಕಲಬುರಗಿ | ಬೆಳೆ ಹಾನಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

Update: 2025-09-15 19:53 IST

ಕಲಬುರಗಿ: ಕಳೆದ ಆಗಸ್ಟ್ ಮತ್ತು ಇತ್ತೀಚೆಗೆ ಕಲಬುರಗಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ 1.05 ಲಕ್ಷ ಹೆಕ್ಟೇರ್ ಪ್ರಮಾಣದ ಬೆಳೆ ಹಾನಿಯಾಗಿದ್ದು, ಇದರಲ್ಲಿ ಬೆಳೆ ವಿಮೆಯಡಿ ನೊಂದಾಯಿತರ ಪೈಕಿ ಶೇ.45ರಷ್ಟು ರೈತರು ಪರಿಹಾರಕ್ಕೆ ದೂರು ಸಲ್ಲಿಸಿದ್ದಾರೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಕಲಬುರಗಿ ತಾಲೂಕಿನ ಕೆರೆ ಭೋಸಗಾ ಗ್ರಾಮದಲ್ಲಿ ಸರ್ವೆ ನಂಬರ್ 87/2 ರಲ್ಲಿನ ಪಾರ್ವತಿಬಾಯಿ‌ ಶ್ರೀಮಂತರಾವ ಅವರ ಹೊಲಕ್ಕೆ ಭೇಟಿ‌ ನೀಡಿದ ಸಚಿವರು, ಸುಮಾರು 4 ಎಕರೆಯಲ್ಲಿ ಬೆಳೆದ ತೊಗರಿ ಇತ್ತೀಚಿನ‌ ಮಳೆಗೆ ಹಾನಿಯಾಗಿರುವುದನ್ನು ಪರಿಶೀಲಿಸಿದಲ್ಲದೆ ರೈತರಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿನ ಬೆಳೆ ಹಾನಿ ನಿಖರ ತನಿಖೆಗೆ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಒಳಗೊಂಡ ತಂಡ‌ ರಚಿಸಿ ಜಂಟಿ ಸಮೀಕ್ಷೆಗೆ ಅದೇಶಿಸಲಾಗಿದೆ. ಬೆಳೆ ಹಾನಿ ಇನ್ನು ಹೆಚ್ಚಾಗಿರುವ ಸಾಧ್ಯತೆ ಇದೆ ಎಂದರು.

ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಹಣ ತುಂಬಾ ಕಡಿಮೆ ಸಿಗುತ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರವೇ ಪರಿಹಾರ‌ ನೀಡಬೇಕಾಗುತ್ತದೆ‌ ಎಂದು ಸಚಿವರು ಉತ್ತರಿಸಿದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್‌, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಸೋಮಶೇಖರ ಬಿರಾದಾರ, ಕಲಬುರಗಿ ತಹಶೀಲ್ದಾರ ಕೆ. ಆನಂದಶೀಲ ಮತ್ತಿತ್ತರರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News