ಕಲಬುರಗಿ | ಜು.13ರಂದು ವಿಭಾಗ ಮಟ್ಟದ ಓಬಿಸಿ ಸಮುದಾಯದ ವಿಚಾರಗೋಷ್ಠಿ : ಅವ್ವಣ್ಣ ಮ್ಯಾಕೇರಿ
ಕಲಬುರಗಿ: ಕೇಂದ್ರ ಸರ್ಕಾರವು ಸುಮಾರು 95 ವರ್ಷಗಳ ನಂತರ ನಡೆಸುತ್ತಿರುವ ಜಾತಿ ಜನಗಣತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಇದೇ 13 ರಂದು ಬೆಳಗ್ಗೆ 11 ಗಂಟೆಗೆ ನಗರದ ಚಂದ್ರಶೇಖರ ಪಾಟೀಲ್ ವಸತಿ ನಿಲಯದ ಸ್ಯಾಕ್ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಸಮುದಾಯದ ಕಲಬುರಗಿ ವಿಭಾಗ ಮಟ್ಟದ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಎಲ್ಲ ಹಿಂದುಳಿದ ವರ್ಗಗಳ ಸಮುದಾಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧಿಜೀವಿಗಳು, ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವಿಚಾರಗೋಷ್ಟಿಗೆ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಇನ್ ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್‌ಕುಮಾರ, ಮೈಸೂರು ಸಂಸ್ಥಾನದ ಮಹಾರಾಜ, ಸಂಸದ ಯದುವೀರ್ ಒಡೆಯರ್, ಸಮಾಜ ಸೇವಕ ವಾದಿರಾಜ್ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವಿಚಾರಗೋಷ್ಠಿಗೆ ಸುಮಾರು 2 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಈ ಗೋಷ್ಠಿ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದ ಹಿಂದುಳಿದ ಘಟಕಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು ಎಂದರು.
ಶರಣಪ್ಪ ತಳವಾರ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಬಗಲಿ, ಸಂಜಯ ಮಿಸ್ಕಿನ್, ಲಿಂಗರಾಜ ಬಿರಾದಾರ, ದಿಲೀಪ ಪಾಟೀಲ್, ಹಣಮಂತರಾವ ಹೂಗಾರ, ದೇವೇಂದ್ರ ದೇಸಾಯಿ ಕಲ್ಲೂರ, ಮಲ್ಲಿಕಾರ್ಜುನ ಎಮ್ಮೆನೂರ, ರೇವಣಸಿದ್ಧ ಸಂಕಾನಿ ಮತ್ತಿತರರು ಇದ್ದರು.