ಕಲಬುರಗಿ | ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿದ ಡಾ.ಶರಣಬಸವಪ್ಪ ಅಪ್ಪರವರ ಅಂತ್ಯಕ್ರಿಯೆ
ಕಲಬುರಗಿ: ತ್ರಿವಿಧ ದಾಸೋಹಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸಂಜೆಯ ವೇಳೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿ, ಕೊನೆಗೆ ವೀರಶೈವ ಲಿಂಗಾಯತ ವಿಧಿ ವಿಧಾನಗಳಿಂದ ದೇವಸ್ಥಾನದ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಶುಕ್ರವಾರ ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದ ಶಿವಾನುಭವ ಮಂಟಪದಲ್ಲಿ ಅಪ್ಪರವರ ಮೃತದೇಹವನ್ನು ಭಕ್ತರ ದರ್ಶನಕ್ಕೆ ಇರಿಸಲಾಗಿತ್ತು. ಸಂಜೆಯ ವೇಳೆಯಲ್ಲಿ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಇದೇ ಸಮಯದಲ್ಲಿ 9ನೆಯ ಪೀಠಾಧಿಪತಿಯಾಗಿರುವ ಚಿ.ದೊಡ್ಡಪ್ಪ ಅಪ್ಪ ಅವರಿಗೆ ಅವರ ತಂದೆ ಶರಣಬಸವಪ್ಪ ಅಪ್ಪ ರವರ ಪೇಟವನ್ನು ಹಾರಕೂಡ ಶ್ರೀ ಗಳು ತೊಡಿಸಿ, ಸಂಸ್ಥಾನದ ಅಧಿಕೃತ ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಸಚಿವ, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಸೇರಿದಂತೆ ಅನೇಕ ಗಣ್ಯರ ಮಧ್ಯೆ ಪೂಜ್ಯ ಅಪ್ಪಾಜಿಯವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಇದಕ್ಕೂ ಮುನ್ನ ರಾಜ್ಯದ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸರ್ಕಾರ ಪರವಾಗಿ ಭಾಗವಹಿಸಿ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಇಲ್ಲಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿದ್ದ ಪೂಜ್ಯ ಅಪ್ಪಾಜಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರವಾಗಿದೆ. ನಾಡಿನಾದ್ಯಂತ ಅಸಂಖ್ಯಾತ ಭಕ್ತ ವೃಂದ ಹೊಂದಿರುವ ಡಾ.ಶರಣಬಸವಪ್ಪ ಅಪ್ಪಾಜಿ ಅವರ ಲಿಂಗೈಕ್ಯ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪಾಜಿ ಅವರು, ಅನ್ನ, ಅಕ್ಷರ ದಾಸೋಹದ ಮೂಲಕ ಜಾತಿ, ಧರ್ಮ ರಹಿತ ಸಮ ಸಮಾಜ ನಿರ್ಮಿಸಲು ಕಾರಣಿಭೂತರಾಗಿದ್ದಾರೆ ಎಂದರು.
ಕರ್ನಾಟಕ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕಲಬುರಗಿ ಉತ್ತರ ಶಾಸಕಿ ಮತ್ತು ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಯಮಿತದ ಅಧ್ಯಕ್ಷೆ ಕನೀಜ್ ಫಾತಿಮಾ, ಬಸವರಾಜ ಮತ್ತಿಮೂಡ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಬಾಬುರಾವ ಚಿಂಚನಸೂರು, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಚಂದ್ರಶೇಖರ ಪಾಟೀಲ, ಶಶೀಲ ಜಿ. ನಮೋಶಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪ್ರಾದೇಶಿಕ ಆಯುಕ್ತೆ ಜಹೀರಾ ನಸ್ಸೀಮ್, ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಶಾಂತನು ಸಿನ್ಹಾ, ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ಸರ್ಕಾರಿ ಗೌರವ ಸಲ್ಲಿಕೆ:
ಈ ಸಂದರ್ಭದಲ್ಲಿ ಜ್ಞಾನ ಭಂಡಾರಿ ಡಾ.ಶರಣಬಸವಪ್ಪ ಅಪ್ಪಾಜಿ ಅವರ ಲಿಂಗೈಕ್ಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಆದೇಶಿಸಿರುವುದರಿಂದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ನೇತೃತ್ವದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಅಧಿಕಾರಿಗಳ ತಂಡವು ಪೂಜ್ಯರ ಪಾರ್ಥಿವ ಶರೀರಕ್ಕೆ ಪುಷ್ಪನಮನದೊಂದಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೃತರ ಗೌರವಾರ್ಥವಾಗಿ ಪಿ.ಎಸ್.ಐ. ಮಹಾದೇವ ಪಾಟೀಲ ನೇತೃತ್ವದ ಪೊಲೀಸ್ ಮತ್ತು ಬ್ಯಾಂಡ್ ತುಕಡಿ ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿತ್ತು.