Kalaburagi | ತೊಗರಿ, ಹತ್ತಿ ಬೆಳೆ ವಿಮೆ : ಜು.31ರಂದು ಕೊನೆಯ ದಿನ

Update: 2026-07-24 20:45 IST

ಸಾಂದರ್ಭಿಕ ಚಿತ್ರ

ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ 2026ರ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆ ಅನುಷ್ಠಾನಕ್ಕೆ ಇಂಡಸ್‌ಇಂಡ್ ಜನರಲ್ ಇನ್ಸುರೆನ್ಸ್ ಸಂಸ್ಥೆಯನ್ನು ನೇಮಕ ಮಾಡಲಾಗಿದೆ ಎಂದು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ತೊಗರಿ (ಮಳೆ ಆಶ್ರಿತ ಹಾಗೂ ನೀರಾವರಿ), ಹತ್ತಿ (ಮಳೆ ಆಶ್ರಿತ ಹಾಗೂ ನೀರಾವರಿ), ಎಳ್ಳು, ಸಜ್ಜೆ, ಮೆಕ್ಕೆಜೋಳ (ಮಳೆ ಆಶ್ರಿತ ಹಾಗೂ ನೀರಾವರಿ) ಹಾಗೂ ಸೋಯಾಬೀನ್ (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.

ಹೆಸರು ಹಾಗೂ ಉದ್ದು (ಮಳೆ ಆಶ್ರಿತ) ಬೆಳೆಗಳಿಗೆ ನೋಂದಣಿ ಅವಧಿ ಜುಲೈ 15ರಂದು ಮುಕ್ತಾಯಗೊಂಡಿದ್ದು, ಸೂರ್ಯಕಾಂತಿ (ಮಳೆ ಆಶ್ರಿತ) ಮತ್ತು ಭತ್ತ (ನೀರಾವರಿ) ಬೆಳೆಗಳಿಗೆ ಆಗಸ್ಟ್ 14 ಕೊನೆಯ ದಿನವಾಗಿದೆ.

ಬೆಳೆಸಾಲ ಪಡೆಯದ ರೈತರು ನೋಂದಣಿಗೆ ಪಹಣಿ, ಆಧಾರ್‌ಗೆ ಜೋಡಿಸಲಾದ ಬ್ಯಾಂಕ್ ಖಾತೆ ಅಥವಾ ಪಾಸ್‌ಬುಕ್ ಹಾಗೂ ಆಧಾರ್ ಸಂಖ್ಯೆಯೊಂದಿಗೆ ಡಿಸಿಸಿ/ಇತರೆ ಬ್ಯಾಂಕ್‌ಗಳು, ಗ್ರಾಮ-ಒನ್ ಕೇಂದ್ರಗಳು ಹಾಗೂ ಸಿಎಸ್ಸಿ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ, ಪ್ರತಿಕೂಲ ಹವಾಮಾನ, ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ, ಗುಡುಗು-ಮಿಂಚಿನಿಂದ ಉಂಟಾಗುವ ಬೆಂಕಿ ಅವಘಡ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವಾದಲ್ಲಿ ರೈತರು ಬೆಳೆ ವಿಮೆ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ರೈತರು ಉಳಿದ ಬೆಳೆಗಳ ಆಯ್ಕೆ ಕುರಿತು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು. ನೋಂದಣಿಗಾಗಿ ಬ್ಯಾಂಕ್‌ಗಳು ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ಬೆಳೆ ವಿಮೆ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

ಪ್ರತಿ ಹೆಕ್ಟೇರ್‌ಗೆ ಪಾವತಿಸಬೇಕಾದ ವಿಮಾ ಕಂತು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News