ಕಲಬುರಗಿ | ಮಹಿಳಾ ಅಸ್ಮಿತೆಗೆ ಸಮಾನತೆ ಅವಶ್ಯ : ಡಾ.ಸಾರಿಕಾದೇವಿ ಕಾಳಗಿ
ಕಲಬುರಗಿ : ಸಮಾಜದಲ್ಲಿನ ಲಿಂಗ ತಾರತಮ್ಯ ನಿವಾರಣೆಗೆ ಕಾನೂನುಗಳ ಪರಿಪಾಲನೆ ಬೇಕು. ಇಂದು ಮಹಿಳಾ ಅಸ್ಮಿತೆಗಾಗಿ ಸಮಾನತೆ ಬಹಳ ಅವಶ್ಯಕವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸಾರಿಕಾದೇವಿ ಕಾಳಗಿ ಹೇಳಿದರು.
ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ರವಿವಾರ ಏರ್ಪಡಿಸಿದ ಗುರು ಸಾವಿತ್ರಿ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಸಮ ಸಮಾಜ ಕಟ್ಟಲು ಮಹಿಳಾ ಸಮುದಾಯಕ್ಕೆ ಶಿಕ್ಷಣದ ಅವಕಾಶಗಳು ಹೆಚ್ಚಾಗಿ ದೊರೆಯಬೇಕು,. ಪುರುಷ ಸಮಾಜದಲ್ಲಿ ಸ್ತ್ರೀಯತರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಹಾಗೂ ಹೋರಾಟದ ಮಾರ್ಗಗಳು ಎಲ್ಲರಿಗೂ ಪ್ರೇರಣೆಯಾಗಿವೆ. ಇಂಥ ಸಾಧನೆಯ ಹಿಂದೆ ಜ್ಯೋತಿಬಾ ಫುಲೆ ಅವರ ಶಕ್ತಿ ಮುಖ್ಯವಾಗಿತ್ತು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರಾಗಿದ್ದಾರೆ. ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳು ಹೀಗೆ ಮಹಿಳಾ ಶೋಷಿತರ ಪರ ಹಲವಾರು ಸುಧಾರಣೆಯ ಕನಸುಗಳನ್ನು ಹೊತ್ತ ಸಾವಿತ್ರಿಬಾಯಿ ಫುಲೆ ಇಂದು ನಮ್ಮ ಮಧ್ಯದಲ್ಲಿ ದೈಹಿಕವಾಗಿ ಇಲ್ಲದಿದ್ದರೂ ಮಹಿಳಾ ಮತ್ತು ಶೋಷಿತ ಸಮುದಾಯದ ಧ್ವನಿಯಾಗಿ ಅವರು ಇಂದಿಗೂ ಜೀವಂತವಾಗಿದ್ದಾರೆ ಎಂದು ಹೇಳಿದರು.
ಸಮಾಜ ಅಸಮಾನತೆಯಲ್ಲಿ ಬಳಲುತ್ತಾ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಯವರಾಗಿದ್ದು, ಇಂಥ ಮಹಾನ್ ಸಮಾಜ ಸುಧಾರಕರನ್ನು ನೆನೆಯುವ ಮತ್ತು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯ ಪರಿಷತ್ತು ಮಾಡುತ್ತಿದೆ ಎಂದು ಹೇಳಿದರು.
ನಾಲ್ಕನೇ ಹೆಚ್ಚುವರಿ ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಸ್ನೇಹಾ ಪಾಟೀಲ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಮಾಲತಿ ರೇಷ್ಮಿ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ದನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ ಜಾವಳಿ, ಜ್ಯೋತಿ ಕೋಟನೂರ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ರಮೇಶ ಡಿ ಬಡಿಗೇರ ವೇದಿಕೆ ಮೇಲಿದ್ದರು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾಂತೇಶ ಕುಂಬಾರ, ರೇಣುಕಾ ಸರಡಗಿ, ನೀಲಮ್ಮ ಮಾಲಿಪಾಟೀಲ, ಗೀತಾ ಭರಣಿ, ಶಹೆನಾಜ್ ಬೇಗಂ, ಗೋಪಾಲರೆಡ್ಡಿ, ಶಿವಪುತ್ರ ಗುಡ್ಡದ್, ಕವಿತಾ ಶೀಲವಂತ, ಸುರೇಖಾ ಬಮನಳ್ಳಿ, ಅನ್ನಪೂರ್ಣ ನೈಕೋಡಿ, ಲಿಂಗರಾಜ ಪಾಟೀಲ, ಬಿಜಾನಬಿ ಅಬ್ದುಲ್ ನಬಿ ಅವರನ್ನು ಗುರು ಸಾವಿತ್ರಿ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಯಿತು.