ಕಲಬುರಗಿ | ಫಕೀರೇಶ ಕಣವಿಗೆ ವಚನ ಸಂಗೀತ ವಿಭೂಷಣ ಪ್ರಶಸ್ತಿ ಪ್ರದಾನ
ಕಲಬುರಗಿ: ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂಗೈಕ್ಯ ಸೋಮನಾಥಪ್ಪ ಬಸವಣ್ಣಪ್ಪ ಕೂಬಾ ಸ್ಮರಣಾರ್ಥ ಜರುಗಿದ ಅರಿವಿನ ಮನೆ 884ನೇ ದತ್ತಿ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರಿಗೆ ರವಿವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಮಾತನಾಡಿ, "ಭೀಮಣ್ಣ ಖಂಡ್ರೆಯವರು ಹಾವನೂರು ವರದಿಯನ್ನು ವಿಧಾನಸಭೆಯಲ್ಲಿ ಹರಿದು ಹಾಕಿದ ನ್ಯಾಯ ನಿಷ್ಠುರಿಗಳಾಗಿದ್ದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರಕಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ತಂದವರಲ್ಲಿ ಅವರು ಪ್ರಮುಖರು" ಎಂದು ಅವರ ಕಠಿಣ ನಿರ್ಧಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು.
ಬಸವಣ್ಣನವರ 432 ವಚನಗಳನ್ನೊಳಗೊಂಡ 'ಸೌಂಡ್ಸ್ ಆಫ್ ಬಸವ' ಜಾಲತಾಣವನ್ನು ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಮಾತನಾಡಿದ ಉದ್ಯಮಿ ರಾಜೇಂದ್ರ ಖೂಬಾ, ಈ ಜಾಲತಾಣದ ಮೂಲಕ ಜಗತ್ತಿನ ಯಾವುದೇ ಭಾಷೆಯಲ್ಲಿ ವಚನಗಳನ್ನು ಓದಬಹುದು, ಅರ್ಥೈಸಿಕೊಳ್ಳಬಹುದು ಹಾಗೂ ಹಾಡಿನ ರೂಪದಲ್ಲಿ ಆಲಿಸಬಹುದು ಎಂದು ವಿವರಿಸಿದರು.
ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಫಕೀರೇಶ ಕಣವಿ ಅವರಿಗೆ 2026ನೇ ಸಾಲಿನ 'ವಚನ ಸಂಗೀತ ವಿಭೂಷಣ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಜಾಲತಾಣ ವಿನ್ಯಾಸಗೊಳಿಸಿದ ಮಲ್ಲಿಕಾರ್ಜುನ್ ರಾವ್ ಮತ್ತು ವಚನ ವಾಚನ ಮಾಡಿದ ಮಮತಾ ಎಸ್.ಎನ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾವಿ, ಕಾರ್ಯದರ್ಶಿ ಭೀಮಾಶಂಕರ್ ಫಿರೋಜಾಬಾದ್ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಾರ ಕಣವಿ ಹಾಗೂ ಪಂಚಾಕ್ಷರಿ ಕಣವಿ ಅವರಿಂದ ವಚನ ಗಾಯನ ಜರುಗಿತು. ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್. ವಾಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಸವ ಸಮಿತಿಯ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ, ಕಾರ್ಯದರ್ಶಿ ಡಾ. ಆನಂದ ಸಿದ್ದಾಮಣಿ, ಶರಣಗೌಡ ಪಾಟೀಲ್ ಪಾಳ, ಬಂಡಪ್ಪ ಕೇಸುರ್, ಉದ್ದಂಡಯ್ಯ ಮತ್ತಿತ್ತರರು ಉಪಸ್ಥಿತರಿದ್ದರು.