×
Ad

ಕಲಬುರಗಿ | ಪುಸ್ತಕ ಗೋದಾಮಿಗೆ ಬೆಂಕಿ: 1 ಕೋಟಿ ರೂ. ಮೌಲ್ಯದ 2 ಲಕ್ಷ ಪುಸ್ತಕಗಳು ಭಸ್ಮ

Update: 2025-05-17 19:10 IST

ಕಲಬುರಗಿ : ಆಳಂದ ಪಟ್ಟಣದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಪುಸ್ತಕ ಗೋದಾಮೊಂದಕ್ಕೆ ಶುಕ್ರವಾರ ಮಧ್ಯಾಹ್ನ ಬೆಂಕಿ ತಗುಲಿದ ಘಟನೆ ನಡೆದಿದೆ. ಪ್ರಸಕ್ತ ಸಾಲಿಗೆ 4ರಿಂದ 8ನೇ ತರಗತಿಗೆ ವಿವಿಧ ಶಾಲೆಗಳಿಗೆ ವಿತರಣೆಗಾಗಿ ದಾಸ್ತಾನು ಕೈಗೊಂಡ ಪುಸ್ತಕ ಕೋಣೆಗೆ ಬೆಂಕಿ ತಗುಲಿ ಭಾರೀ ನಷ್ಟವಾಗಿದೆ.

ಘಟನೆಯಲ್ಲಿ ಒಂದು ಕೋಣೆಯಲ್ಲಿನ ಸುಮಾರು 2 ಲಕ್ಷಕ್ಕೂ ಅಧಿಕ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು. ಒಟ್ಟು 1 ಕೋಟಿ ರೂ.ಗೂ ಹೆಚ್ಚಿನ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇನ್ನೊಂದು ಕೋಣೆಯಲ್ಲಿ ಪುಸ್ತಕಗಳು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ತೀವ್ರ ಪ್ರಯತ್ನ ನಡೆಸಿದರೂ, ಬೆಂಕಿಯ ತೀವ್ರತೆಯಿಂದಾಗಿ ಯಶಸ್ವಿಯಾಗಲಿಲ್ಲ. ಶಾಲೆಗಳಿಗೆ ವಿತರಣೆಯಾಗಬೇಕಿದ್ದ ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಮತ್ತು ಇತರ ಶೈಕ್ಷಣಿಕ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿವೆ.

ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಂಗಸ್ವಾಮಿ ಶೆಟ್ಟಿ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ, ಬಿಆರ್‍ಸಿ ಅಣ್ಣಪ್ಪ ಹಾದಿಮನಿ, ಇಸಿಒ ಶ್ರೀಮಂತ ಪಾಟೀಲ ಅವರು ಬಂದು ಹೆಚ್ಚಿನ ಅನಾಹುತವನ್ನು ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಯಶಸ್ವಿಯಾದರು.

ಸ್ಥಳೀಯ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೋಡ್ಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂರ್ಟ್‌ ಅಥವಾ ದುರಂತ ಚಟುವಟಿಕೆಯ ಸಾಧ್ಯತೆಯನ್ನು ತಳ್ಳಿಹಾಕದೆ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಶಿಕ್ಷಣಾಧಿಕಾರಿಗಳು ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿಕೊಂಡು, ಸಾಕ್ಷ್ಯಗಳ ಸಂಗ್ರಹಣೆಗೆ ಪೊಲೀಸರು ಮುಂದಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News