×
Ad

Kalaburagi | ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ

Update: 2026-07-08 21:26 IST

ಕಲಬುರಗಿ: ದಂತ ದಿನಾಚರಣೆ ಅಂಗವಾಗಿ ನಗರದ ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗಾಗಿ ಉಚಿತ ಹಲ್ಲಿನ ತಪಾಸಣೆ ಹಾಗೂ ದಂತ ಆರೋಗ್ಯ ಜಾಗೃತಿ ಶಿಬಿರವನ್ನು ಬುಧವಾರ ಆಯೋಜಿಸಲಾಯಿತು.

ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ), ಕಡಗಂಚಿ ಶಾಖೆ, ಅಲ್ ಬ್ರದರ್ ಡೆಂಟಲ್ ಆಸ್ಪತ್ರೆ ಹಾಗೂ ಕೇಂದ್ರ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಬಿರವನ್ನು ಟ್ರಸ್ಟ್‌ನ ಕಾರ್ಯದರ್ಶಿ ಫಾದರ್ ವಿಲಿಯಮ್ ಮಿರಿಂಡಾ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ವಿಸ್ತರಿಸುವ ಉದ್ದೇಶದಿಂದ ಟ್ರಸ್ಟ್‌ನ ಮೂರನೇ ಶಾಖೆಯನ್ನು ಕಡಗಂಚಿ ಸಮೀಪ ಆರಂಭಿಸಲಾಗಿದೆ. ಆರೋಗ್ಯವೇ ಮಹಾಭಾಗ್ಯ ಎಂಬ ನಿಟ್ಟಿನಲ್ಲಿ ಕಾರಾಗೃಹದ ಬಂದಿಗಳ ಆರೋಗ್ಯ ಕಾಳಜಿಗಾಗಿ ದಂತ ತಪಾಸಣೆ ಶಿಬಿರ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಇತರೆ ಆರೋಗ್ಯ ತಪಾಸಣಾ ಶಿಬಿರಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ ಬ್ರದರ್ ಡೆಂಟಲ್ ಆಸ್ಪತ್ರೆಯ ದಂತ ವಿಭಾಗದ ಮುಖ್ಯಸ್ಥೆ ಡಾ. ಸಂಗೀತಾ ಮಾತನಾಡಿ, ಹಲ್ಲು ದೇಹದ ಪ್ರಮುಖ ಅಂಗವಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಹಲ್ಲಿನ ಆರೈಕೆ ಅತ್ಯಗತ್ಯ. ಪ್ರತಿದಿನ ಎರಡು ಬಾರಿ ಹಲ್ಲು ಉಜ್ಜುವುದು ಸೇರಿದಂತೆ ದಂತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಆರ್. ಅವರು ಬಂದಿಗಳಿಗೆ ಹಲ್ಲಿನ ಆರೋಗ್ಯದ ಮಹತ್ವವನ್ನು ವಿವರಿಸಿ, ಹಲ್ಲುಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಶಿಬಿರದಲ್ಲಿ ವೈದ್ಯಾಧಿಕಾರಿ ಡಾ. ಆನಂದ ಅಡಕಿ, ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್‌ಗಳಾದ ಸುನಂದ, ಸಾಗರ ಪಾಟೀಲ್, ಶ್ಯಾಮ್ ಬಿದ್ರಿ ಹಾಗೂ ಅಲ್ ಬ್ರದರ್ ಡೆಂಟಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

ಶಿಬಿರದಲ್ಲಿ ಒಟ್ಟು 89 ಮಂದಿ ಬಂದಿಗಳಿಗೆ ಹಲ್ಲಿನ ತಪಾಸಣೆ ನಡೆಸಲಾಗಿದ್ದು, ಸಂಚಾರಿ ದಂತ ಚಿಕಿತ್ಸಾ ಬಸ್ ಮೂಲಕ ಸ್ಕ್ರೀನಿಂಗ್ ಸಹ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಬಿ. ಸುರೇಶ್ ಸ್ವಾಗತಿಸಿದರು. ಶಿಕ್ಷಕ ನಾಗರಾಜ ಮುಲಗೆ ಅವರು ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News