×
Ad

ಕಲಬುರಗಿ | ಗಾಂಧೀಜಿಯವರ ಜೀವನವೇ ನಮಗೆಲ್ಲ ಸಂದೇಶ: ಡಾ.ನೀಲಾಂಬಿಕಾ ಶೇರಿಕಾರ

Update: 2025-10-03 21:36 IST

ಕಲಬುರಗಿ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ ಹಾಗೂ ಅಹಿಂಸೆಯ ಮೂಲಕ ಇಡೀ ವಿಶ್ವಕ್ಕೆ ಬೆಳಕು ತೋರಿಸಿದ ಮಾಹಾನ್ ಚೇತನ. ಅವರ ಜೀವನವೇ ನಮಗೆಲ್ಲ ಸಂದೇಶವಾಗಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಹೇಳಿದರು.

ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಗಾಂಧೀ ಅಧ್ಯಯನ ಕೇಂದ್ರ ಅಡಿಯಲ್ಲಿ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಅವರ ಸರಳ ಜೀವನ ಪ್ರತಿಯೊಬ್ಬರಿಗೂ ಆದರ್ಶವಾಗಿದೆ. ಅವರ ನಡೆ-ನುಡಿಗಳು ಪ್ರತಿಯೊಬ್ಬರು ಪಾಲಿಸಬೇಕಾಗಿದೆ. ಗಾಂಧೀಜಿಯವರು ಭಾರತದ ಅಸ್ಮಿತೆಯ ಪ್ರತೀಕ, ಬ್ರಿಟಿಷರ ದುರಾಡಳಿತ, ದಬ್ಬಾಳಿಕೆ ಮತ್ತು ಶೋಷಣೆಯನ್ನು ವಿರೋಧಿಸಿ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದರು. ಅನಿಷ್ಠ ಪದ್ಧತಿಯಾದ ಜಾತಿ ವ್ಯವಸ್ಥೆಯನ್ನು ಗಾಂಧೀಜಿ ಕಠೋರವಾಗಿ ವಿರೋಧಿಸಿದರು. 1924 ರಲ್ಲಿ ಗಾಂಧೀಜಿಯವರು ಶರಣಬಸವೇಶ್ವರ ಸಂಸ್ಥಾನ ಭೇಟಿ ನೀಡಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಆಶೀರ್ವದ ಪಡೆದರು. ನಾವೆಲ್ಲರೂ ಗಾಂಧೀ ಮಾರ್ಗದಲ್ಲಿ ಸಾಗಿದರೆ ನೈತಿಕವಾಗಿ ಬಲಗೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಮಾತನಾಡಿ, ಸರಳತೆ, ಸತ್ಯ, ಅಹಿಂಸೆಯ ತತ್ವಗಳು ಮಹಾತ್ಮ ಗಾಂಧೀಜಿಯವರು ಜೀವನದುದ್ದಕೂ ಪಾಲಿಸಿಕೊಂಡು ಬಂದಿದ್ದರು. ಎಷ್ಟೇ ಕಷ್ಟ ಬಂದರೂ ಅವುಗಳನ್ನು ಸಹನೆ, ಅಹಿಂಸೆಯಿoದ ಬಗೆ ಹರಿಸಿ ಬ್ರಿಟಿಷರ ವಿರೋಧ ಹೋರಾಡಿದರು ಎಂದರು.

ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಮಾತನಾಡಿ, ಸತ್ಯ ಹಾಗೂ ಅಹಿಂಸೆ ತತ್ವಗಳ ಪ್ರಬಲ ಪ್ರತಿಪಾದಕರಾಗಿರುವ ಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಶಾಂತಿಯುತವಾಗಿ ಹೋರಾಡಿದರು. ಅವರ ತತ್ವಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿವೆ. ಅವರು ವಿಶ್ವದಾದ್ಯಂತ ಶಾಂತಿ ಮತ್ತು ಏಕತೆಯ ಸಂಕೇತವಾಗಿದ್ದರು ಎಂದರು.

ಗಾoಧೀ ಅಧ್ಯಯನ ಕೇಂದ್ರದ ಸಂಯೋಜಕಿ ಅನಿತಾ ಗೊಬ್ಬುರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಪ್ರಾಧ್ಯಾಪಕ ಡಾ.ಲಕ್ಷ್ಮೀಪುತ್ರ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News