ಕಲಬುರಗಿ | ಆರೆಸ್ಸೆಸ್ ನೋಂದಣಿ ಬಗ್ಗೆ ಹೈಕೋರ್ಟ್ ಪ್ರಶ್ನಿಸಬೇಕಿತ್ತು: ಮಾಜಿ ಸಚಿವ ಸಿ.ಎಂ ಇಬ್ರಾಹಿಂ
ಕಲಬುರಗಿ: "ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್ ಗೆ ಹೋಗಿರುವ ಆರೆಸ್ಸೆಸ್ ಅನ್ನು ಅದರ ನೋಂದಣಿ ಬಗ್ಗೆ ಪ್ರಶ್ನಿಸಬೇಕಿತ್ತು. ಒಂದು ವೇಳೆ ಅವರು ನೋಂದಣಿ ಆಗಿದ್ದರೆ ಇಂತಹ ಸಮಸ್ಯೆಯೇ ಬರುತ್ತಿರಲಿಲ್ಲ" ಎಂದು ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಸಂಘವು ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿದೆಯೇ? ಅಥವಾ ರಾಜಕೀಯವಾಗಿ ನೋಂದಾಯಿಸಿದೆಯೇ? ಗೊತ್ತಾಗಬೇಕಲ್ಲ ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ನವರು ಮೊದಲು ನೋಂದಣಿ ಮಾಡಿಸಿಕೊಳ್ಳಲಿ, ಆಮೇಲೆ ಸರ್ಕಾರದಿಂದ ಬರಲಿ. ನೊಂದಣಿಯಾಗದೆ ಇರುವ ಸಂಘಕ್ಕೆ ಎಲ್ಲಿಂದ ದುಡ್ಡು ಬರುತ್ತಿದೆ? ಅದರ ಖರ್ಚು ವೆಚ್ಚಗಳು ತೋರಿಸಲಿ ಎಂದು ಸವಾಲು ಹಾಕಿದ ಅವರು, ಆರೆಸ್ಸೆಸ್ ಖರ್ಚು ವೆಚ್ಚಗಳ ಬಗ್ಗೆ ಪ್ರಶ್ನಿಸಿದರೆ ಅವರಿಗೇಕೆ ಇಷ್ಟೊಂದು ಸಿಟ್ಟೇಕೆ? ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ನವರಿಗೆ ಈವರೆಗೆ ರೈತರ, ದೀನ ದಲಿತರ ಕಾಳಜಿ ಇಲ್ಲ, ಅವರ ಸಮಸ್ಯೆಗಳ ಬಗ್ಗೆಯೂ ಇವರಿಗೆ ಗೊತ್ತಿಲ್ಲ. ಅವರ "ಧ್ಯೇಯೋದ್ದೇಶವೊಂದೇ; ಭಗವಾ ಧ್ವಜ ಮತ್ತು ಮನುಸ್ಮೃತಿಯನ್ನು ದೇಶದಲ್ಲಿ ಜಾರಿಗೆ ತರಬೇಕೆನ್ನುವುದು" ಎಂದರು.
ಆರೆಸ್ಸೆಸ್ ನಿಂದ ದೇಶಕ್ಕೆ ದೊಡ್ಡ ಅಪಾಯವಿದೆ ಎಂದು ಸರ್ದಾರ್ ವಲ್ಲಭ ಭಾಯಿ ಪಟೇಲ್ ಹಾಗೂ ಬಾಬು ರಾಜೇಂದ್ರ ಪ್ರಸಾದ್ ಅವರೇ ಹೇಳಿದ್ದರು. ಈಗ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮತ್ತೆ ಕಾಂಗ್ರೆಸ್ ಸೇರುವ ಚರ್ಚೆ ಇಲ್ಲ :
ಸಿಎಂ ಸಿದ್ದರಾಮಯ್ಯ ಅವರು ನನಗೆ ಗೆಳೆಯರು. ಅವರು ಆಗಾಗ ಸಿಗುತ್ತಾರೆ, ಅದರಂತೆಯೇ ಬಾಗಲಕೋಟೆಯಲ್ಲಿ ಸಿಕ್ಕಿದ್ದರು. ಮತ್ತೆ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆದಿಲ್ಲ. ಅವರು ಅದರ ಬಗ್ಗೆ ಏನೂ ಕೇಳಿಲ್ಲ. ಮುಂದಿನ ನಡೆ ಶೀಘ್ರ ತೀರ್ಮಾನ ಕೈಗೊಳ್ಳುವೆ ಎಂದು ಸಿ.ಎಂ ಇಬ್ರಾಹಿಂ ತಿಳಿಸಿದ್ದಾರೆ.