Kalaburagi | ನೀಟ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಐಡಿಯಲ್ ವೀಡ್ಜಿ ಅಕಾಡೆಮಿಯಿಂದ ಸನ್ಮಾನ

Update: 2026-08-06 18:31 IST

ಕಲಬುರಗಿ: ನೀಟ್ (NEET) ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಹಾಗೂ ಅವರ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ನಗರದ ಕನ್ನಡ ಭವನದಲ್ಲಿ ಐಡಿಯಲ್ ವೀಡ್ಜಿ ಅಕಾಡೆಮಿ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಕೆಆರ್‌ಟಿಸಿ ಮಾಜಿ ಅಧ್ಯಕ್ಷ ಇಲಿಯಾಸ್ ಸೇಠ್ ಭಗವಾನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸ ಅತ್ಯಗತ್ಯ. ವಿದ್ಯಾರ್ಥಿಗಳು ಗುರಿಯತ್ತ ದೃಢ ಸಂಕಲ್ಪದಿಂದ ಸಾಗಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಾವಿದ ಆಯಾಜುದ್ದೀನ್ ಪಟೇಲ್ ಮಾತನಾಡಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಅವರ ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಯುವಶಕ್ತಿ ಭವಿಷ್ಯದಲ್ಲಿ ಉತ್ತಮ ಭಾರತದ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಐಡಿಯಲ್ ವೀಡ್ಜಿ ಅಕಾಡೆಮಿಯ ನಿರ್ದೇಶಕ ಮುಜ್ತಾಹೀದ್ ಉಮರ್ ಮಾತನಾಡಿ, ವಿವಿಧ ಸವಾಲುಗಳ ನಡುವೆಯೂ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಮೂರು ಅಂಕಿಯ ರಾಷ್ಟ್ರೀಯ ರ್ಯಾಂಕ್ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕಳೆದ ಹಲವು ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಯಶಸ್ಸಿಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಅಮ್ಜದ್ ಜಾವೀದ್ ಮಾತನಾಡಿ, ಜಗತ್ತಿನಲ್ಲಿ ಹೆಸರು ಮಾಡಿದ ಪ್ರತಿಯೊಬ್ಬ ಸಾಧಕರ ಯಶಸ್ಸಿನ ಹಿಂದೆ ನಿರಂತರ ಅಧ್ಯಯನ, ಪರಿಶ್ರಮ ಮತ್ತು ಗುರಿ ಸಾಧಿಸುವ ಮನೋಭಾವವಿದೆ. ವಿದ್ಯಾರ್ಥಿಗಳು ಓದಿನೊಂದಿಗೆ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಡಾ. ಸಯ್ಯದ್ ಸಲಾವುಲ್ಲಾ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಯೋಜಿತ ಅಧ್ಯಯನ ಹಾಗೂ ನಿರಂತರ ಅಭ್ಯಾಸ ಅಗತ್ಯವೆಂದು ಹೇಳಿದರು.

ಈ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸೀಮಾ ಐಮನ್ (595 ಅಂಕ), ಅವರ ಅವಳಿ ಸಹೋದರಿ ಸೋಪುನಿಸಬಾ (581 ಅಂಕ), ವಿವೇಕಾನಂದ ಉಮೇಶ್ (547 ಅಂಕ), ತಜಾಹೀನ್ ತಮೀಮ್ (488 ಅಂಕ) ಹಾಗೂ ಅಕ್ಸಾ ಮಾಹೀನ್ (408 ಅಂಕ) ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಐಡಿಯಲ್ ವೀಡ್ಜಿ ಅಕಾಡೆಮಿಯ ಅಧ್ಯಕ್ಷ ಮುಜಾಹಿದ್ ಪಾಶಾ, ಅಝೀಝ್ ಶಹಾನಾ, ಇಕ್ಬಾಲ್ ಅಲಿ, ಕಲಾವಿದ ರೆಹಮಾನ್ ಪಟೇಲ್, ನಿಸಾರ್ ಅಹ್ಮದ್ ವಜೀರ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News