Chitapur | ರುದ್ರಪ್ಪ ಲಮಾಣಿ ಸಚಿವರಾಗಿ ನೇಮಕ: ಬಂಜಾರ ಸಮುದಾಯದಿಂದ ಸಂಭ್ರಮಾಚರಣೆ
ಚಿತ್ತಾಪುರ: ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಸ್ವಾಗತಿಸಿ ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಬಂಜಾರ ಸಮುದಾಯದ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ ಚವ್ಹಾಣ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಲಂಬಾಣಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಜೊತೆಗೆ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಗುರುತಿಸಿ ಸಚಿವ ಸ್ಥಾನ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ನಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸರ್ಕಾರ ಲಂಬಾಣಿ ಸಮುದಾಯಕ್ಕೆ ಗೌರವ ಸಲ್ಲಿಸಿದೆ. ಇದು ಇಡೀ ಸಮುದಾಯಕ್ಕೆ ದೊರೆತ ಸಮ್ಮಾನವಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಸಮುದಾಯದ ಜನರಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ಹೇಳಿದರು.
ಸಚಿವ ರುದ್ರಪ್ಪ ಲಮಾಣಿ ಅವರು ತಮ್ಮ ಹುದ್ದೆಯನ್ನು ಸಮುದಾಯದ ಅಭಿವೃದ್ಧಿ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸಲಿದ್ದಾರೆ ಎಂಬ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು.
ಬಂಜಾರ ಸಮಾಜದ ಮುಖಂಡರಾದ ಕಿಶನ್ ನಾಯಕ, ಲಕ್ಷ್ಮಣ್ ನಾಯಕ್, ಕಿರಣ್ ನಾಯಕ್, ಕಿಶನ್ ಚವ್ಹಾಣ, ಕುಮಾರ್ ಜಾಧವ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.