Kalaburagi | ಭೂಮಾನಂದ ಹತ್ಯೆ ಖಂಡನೆ: ಆರೋಪಿಗಳ ಬಂಧನ, 50 ಲಕ್ಷ ರೂ. ಪರಿಹಾರಕ್ಕೆ ಒತ್ತಾಯ
ಕಲಬುರಗಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದಿನಾಳ ಗ್ರಾಮದ ಮಾದಿಗ ಸಮಾಜದ ಹೋರಾಟಗಾರ ಭೂಮಾನಂದ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಡಾ. ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿ ಹಾಗೂ ಮಾದಿಗ ಸಮಾಜದ ಮುಖಂಡರು, ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ಸಂಬಂಧ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜು ಎಸ್. ಕಟ್ಟಿಮನಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಜೀವಿಸುವ ಹಕ್ಕು ಹಾಗೂ ಸಮಾನತೆಯ ಹಕ್ಕನ್ನು ನೀಡಿದೆ. ಆದರೆ ರಾಜ್ಯದಲ್ಲಿ ದಲಿತ ಮುಖಂಡರು, ಸಾಮಾಜಿಕ ಹೋರಾಟಗಾರರು ಹಾಗೂ ಶೋಷಿತ ಸಮುದಾಯಗಳ ಪರ ಧ್ವನಿಯಾಗಿರುವವರ ಮೇಲೆ ನಡೆಯುತ್ತಿರುವ ದಾಳಿಗಳು ಆತಂಕಕಾರಿ ಬೆಳವಣಿಗೆಯಾಗಿವೆ. ದಲಿತರ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ಸರ್ಕಾರವು ದಲಿತ ಸಮುದಾಯದ ಜನರ ಜೀವ, ಆಸ್ತಿ ಹಾಗೂ ಗೌರವದ ರಕ್ಷಣೆಗೆ ವಿಶೇಷ ಜವಾಬ್ದಾರಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಭೂಮಾನಂದ ಅವರ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಹಾಗೂ ಇದರ ಹಿಂದಿರುವ ಸಂಚುಕೋರರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು. ರಾಜ್ಯದಲ್ಲಿ ದಲಿತ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಇರುವ ಜೀವ ಬೆದರಿಕೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಮೃತ ಭೂಮಾನಂದ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, 10 ಎಕರೆ ಜಮೀನು ಮಂಜೂರು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಶರಥ ಕಲಗುರ್ತಿ, ರಮೇಶ ವಾಡೇಕರ, ಮಲ್ಲಿಕಾರ್ಜುನ ಜಿನ್ನಕೇರಿ, ಪ್ರದೀಪ ಭಾವೆ, ಮಂಜುನಾಥ ಲೇಗಂಟಿ, ಅಮೃತ ಸಾಗರ, ಶ್ರೀನಿವಾಸ ರಾಮನಾಳಕರ, ರಂಜೀತಕುಮಾರ ಮುಲಿಮನಿ, ಸಚಿನ್ ಕಟ್ಟಿಮನಿ, ರಮಾಕಾಂತ ಪೂಜಾರಿ, ಸುನೀತಾ ಕೊಲ್ಲೂರ, ಅನೀಲ ಬೆಳಕೇರಿ, ಕೃಷ್ಣ ತಂಗಡಗಿ, ಅಭಿ ಹಾದಿಮನಿ, ಮಹೇಶ ಮೂಲಿಮನಿ, ಪ್ರಹಲ್ಲಾದ ಹಡಗಿಲ, ಮನೋಹರ ಬೀರನೂರ, ಗೋಪಾಲ ನಾಟಿಕಾರ, ಮಂಜುನಾಥ ನಾಲವಾರ, ಮಂಜುನಾಥ ಸಿಂಗೆ, ಕಾಶೀನಾಥ ಹಾದಿಮನಿ, ಲೋಕೇಶ ವಾಜಿ, ಮಲ್ಲಿಕಾರ್ಜುನ ದೊಡ್ಡಮನಿ, ಪರಶುರಾಮ ನಾಟೀಕರ, ಮಹಾದೇವಪ್ಪ ಕವಳ, ಮಲ್ಲಿಕಾರ್ಜುನ ಚಟನಳ್ಳಿ, ಅಶೋಕ ಜಗದಾಳೆ, ಜಾನಪ್ಪ ಶಿವನೂರ, ಸುಶೀಲ ಕಾಂಬಳೆ, ಹಣುಮಂತ ಹೊಸಮನಿ, ಹಣುಮಂತ ಅಂಕಲಗಿ, ಸಂಜುಕುಮಾರ ಮಾಳಗಿ, ಸಿದ್ರಾಮ ಅವರಲ್ಲಿ, ಅಮರ ಕಲ್ಯಾಣಕರ, ದಶರಥ ಪಾಲದಕರ, ಪ್ರೇಮ ಹಿಪ್ಪರಗಿ, ಅರುಣ ಧಮ್ಮುರಕರ, ಗುಂಡಪ್ಪ ಸಿರುಡೋನ, ಸುಶೀಲೆ ಕಾಂಬಳೆ, ಧರ್ಮಣ್ಣಾ, ಮಲ್ಲು ಸರಡಗಿ, ಪೂಥವಿರಾಜ, ಚಂದಾ ಕಟ್ಟಿಮನಿ, ಸಂಜು ಕಟ್ಟಿಮನಿ, ಬಿ.ಟಿ. ಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.