Kalaburagi | ಐಇಇಇಇ ಸ್ಪೇಸ್–2026 ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕ ಕೇಂದ್ರೀಯ ವಿವಿ ಭಾಗಿ

ಇಸ್ರೋ, ಡಿಆರ್‌ಡಿಒ ವಿಜ್ಞಾನಿಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಕುರಿತು ಚರ್ಚೆ

Update: 2026-07-23 18:27 IST

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಬೆಂಗಳೂರಿನಲ್ಲಿ ಜುಲೈ 19ರಿಂದ 21ರವರೆಗೆ ನಡೆದ ಪ್ರತಿಷ್ಠಿತ IEEE SPACE–2026 (Space, Aerospace and Advanced Technologies Conference) ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿತು.

ಸಮ್ಮೇಳನದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಎಂಜಿನಿಯರಿಂಗ್ ನಿಕಾಯದ ಡೀನ್ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಪರಮೇಶ, ಸಹಾಯಕ ಪ್ರಾಧ್ಯಾಪಕ ಡಾ. ನೃಸಿಂಹ ಚರಣ್ ಪ್ರಧಾನ್ ಸೇರಿದಂತೆ ವಿಭಾಗದ 15 ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬಾಹ್ಯಾಕಾಶ, ವೈಮಾನಿಕ ವಲಯ ಹಾಗೂ ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳ ಕುರಿತ ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 70ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಕುಲಪತಿಗಳು, ನಿರ್ದೇಶಕರು, ಖ್ಯಾತ ವಿಜ್ಞಾನಿಗಳು, ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಗಳು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಇಸ್ರೋ (ISRO), ಡಿಆರ್‌ಡಿಒ (DRDO) ಸೇರಿದಂತೆ ದೇಶದ ಪ್ರಮುಖ ಸಂಶೋಧನಾ ಸಂಸ್ಥೆಗಳ ಹಿರಿಯ ವಿಜ್ಞಾನಿಗಳು, ರಕ್ಷಣಾ ಹಾಗೂ ಬಾಹ್ಯಾಕಾಶ ಕ್ಷೇತ್ರದ ಪರಿಣಿತರು ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಹಿರಿಯ ವಿಜ್ಞಾನಿಗಳಾದ ಡಾ. ಜಿ. ಸತೀಶ್ ರೆಡ್ಡಿ, ಡಾ. ಬಿ.ಕೆ. ದಾಸ್ ಹಾಗೂ ಡಾ. ಎಸ್. ಸೋಮನಾಥ್ ಅವರೊಂದಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭವಿಷ್ಯದ ಶೈಕ್ಷಣಿಕ ಸಹಭಾಗಿತ್ವ, ಜಂಟಿ ಸಂಶೋಧನಾ ಯೋಜನೆಗಳು ಹಾಗೂ ವೈಜ್ಞಾನಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಿದರು. ಅಲ್ಲದೆ, ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಹಿರಿಯ ವಿಜ್ಞಾನಿಗಳನ್ನು ಆಹ್ವಾನಿಸಿದರು.

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ಭಾರತೀಯ ಗಗನಯಾತ್ರಿಗಳಾದ ಅಂಗದ್ ಪ್ರತಾಪ್ ಹಾಗೂ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಬಾಹ್ಯಾಕಾಶ ಅನ್ವೇಷಣೆಯಲ್ಲಿನ ತಮ್ಮ ಅನುಭವಗಳು ಹಾಗೂ ಭಾರತದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತು ಅವರು ಹಂಚಿಕೊಂಡ ಮಾಹಿತಿಯು ವಿದ್ಯಾರ್ಥಿಗಳಿಗೆ ಪ್ರೇರಣೆಯಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News