Sedam | ವಾರ್ತಾಭಾರತಿ ವರದಿ ಫಲಶ್ರುತಿ; ಇನ್ಫೋಸಿಸ್ ಕಾಲೋನಿಯಲ್ಲಿ ಬೀದಿದೀಪ ಅಳವಡಿಕೆ
ಸೇಡಂ: ಪಟ್ಟಣದ ಇನ್ಫೋಸಿಸ್ ಕಾಲೋನಿಯ ಸುಮಾರು 119 ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಬೀದಿದೀಪಗಳಿಲ್ಲದೆ ಕತ್ತಲಲ್ಲೇ ಜೀವನ ಸಾಗಿಸುತ್ತಿದ್ದ ಸಮಸ್ಯೆಗೆ ವಾರ್ತಾಭಾರತಿಯಲ್ಲಿ ಜುಲೈ 21ರಂದು ಪ್ರಕಟವಾದ ವರದಿ ಪರಿಣಾಮಕಾರಿಯಾಗಿ ಸ್ಪಂದಿಸಿದ್ದು, ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಕಾಲೋನಿಯಲ್ಲಿ ಬೀದಿದೀಪಗಳನ್ನು ಅಳವಡಿಸಿದ್ದಾರೆ.
ಇನ್ಫೋಸಿಸ್ ಕಾಲೋನಿಯಲ್ಲಿ ವಿದ್ಯುತ್ ಕಂಬಗಳಿದ್ದರೂ ಬಹುತೇಕ ಕಡೆ ಬೀದಿದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಇಡೀ ಪ್ರದೇಶ ಕತ್ತಲಲ್ಲಿ ಮುಳುಗುತ್ತಿತ್ತು. ಇದರಿಂದ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ರಾತ್ರಿ ಸಂಚಾರಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ಹಾವು, ಚೇಳು, ಕಪ್ಪೆ ಸೇರಿದಂತೆ ವಿಷಕಾರಿ ಜೀವಿಗಳು ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರಿಂದ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದರು.
ಈ ಕುರಿತು ಸ್ಥಳೀಯರು ದೂರವಾಣಿ ಮೂಲಕ ವಾರ್ತಾಭಾರತಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಜುಲೈ 21ರಂದು ಸಮಸ್ಯೆಯನ್ನು ಪ್ರಮುಖವಾಗಿ ಪ್ರಕಟಿಸಲಾಗಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಂಡು ಬೀದಿದೀಪಗಳನ್ನು ಅಳವಡಿಸಿದರು.
ಇನ್ಫೋಸಿಸ್ ಕಾಲೋನಿಯ ಬಹುತೇಕ ಎಲ್ಲ ಬೀದಿಗಳಲ್ಲೂ ಈಗಾಗಲೇ ಬೀದಿದೀಪಗಳನ್ನು ಅಳವಡಿಸಲಾಗಿದೆ. ಯಾವುದಾದರೂ ಕಡೆ ದೀಪ ಅಳವಡಿಕೆ ಬಾಕಿ ಉಳಿದಿದ್ದರೆ ಪುನಃ ಪರಿಶೀಲನೆ ನಡೆಸಿ ತಕ್ಷಣ ಅಳವಡಿಸಲಾಗುವುದು.”
–ಶರಣಯ್ಯ ಸ್ವಾಮಿ, ಪೌರಾಯುಕ್ತ, ನಗರಸಭೆ
ಇನ್ಫೋಸಿಸ್ ಕಾಲೋನಿ ನಿವಾಸಿಗಳ ಗೋಳನ್ನು ಕೇಳುವವರೇ ಇರಲಿಲ್ಲ. ವಾರ್ತಾಭಾರತಿ ವರದಿಯ ಬಳಿಕ ಅಧಿಕಾರಿಗಳು ತಕ್ಷಣ ಸ್ಪಂದಿಸಿ ನಮ್ಮ ಬಡಾವಣೆಗೆ ಬೆಳಕು ನೀಡುವ ಕೆಲಸ ಮಾಡಿದ್ದಾರೆ.
–ದೇವದಾಸ್ ರಾಠೋಡ್, ನಿವಾಸಿ