ಆಳಂದ ಸರ್ಕಾರಿ ಕಾಲೇಜಿನ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ

ಮಾದರಿ ಪರೀಕ್ಷೆಯಲ್ಲಿ ಭಾಗ್ಯಶ್ರೀ ಪ್ರಥಮ, ವಿನಾಯಕ ದ್ವಿತೀಯ

Update: 2026-07-23 18:30 IST

ಆಳಂದ: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ತಿಂಗಳ ಕಾಲ ಆಯೋಜಿಸಿದ್ದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಗಾರವು ಮಾದರಿ ಪರೀಕ್ಷೆಯೊಂದಿಗೆ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಿಳಾ ಅಂಬಾರಾಯ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕಾಲೇಜಿನಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಕಳೆದ ವರ್ಷದಿಂದ ರಜಾ ಅವಧಿಯಲ್ಲಿ ಅತಿಥಿ ಉಪನ್ಯಾಸಕರ ನಿಸ್ವಾರ್ಥ ಸೇವೆಯಿಂದ ಈ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವರ್ಷಪೂರ್ತಿ ಪ್ರತಿದಿನ ಒಂದು ಗಂಟೆಯಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ತರಗತಿಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಡಾ. ಶಿವಶರಣಪ್ಪ ನಿಂಬರಗಿ ಹಾಗೂ ಡಾ. ಅರವಿಂದ್ ಕುಮಾರ್ ಭದ್ರಶೆಟ್ಟಿ ಭಾಗವಹಿಸಿದ್ದರು.

ತರಬೇತಿ ಶಿಬಿರದಲ್ಲಿ ವಿಷಯ ತಜ್ಞರಾಗಿ ಡಾ. ಅರವಿಂದ್ ಅಂಗಡಿ, ಡಾ. ಮಹದೇವ್ ಮೋಘಾ, ಡಾ. ಢಾಕಪ್ಪ, ರಾಜಶೇಖರ್ ಪಾಟೀಲ್, ಡಾ. ಶಿವಪ್ಪ ಭೂಸನೂರ, ರಾಜ್ ರೆಡ್ಡಿ ಪಾಟೀಲ್, ಡಾ. ಸುಭಾಷ್ ಚಂದ್ರ, ಡಾ. ಶಿವಶಂಕರಯ್ಯ ಸ್ವಾಮಿ ಹಾಗೂ ಶರಣಪ್ಪ ಕೌಂಚೆ ಪಾಠ ಮಾಡಿದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಶಾಂತ ಮಲ್ಲಪ್ಪ ಪಾಟೀಲ್, ಶರಣಪ್ಪ ಭಾವಿ, ಸಂತೋಷ್, ಸಂದೀಪ್ ಹಾಗೂ ಚೆನ್ನಮ್ಮ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.

ಮಾದರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು. ಭಾಗ್ಯಶ್ರೀ ಪ್ರಥಮ ಹಾಗೂ ವಿನಾಯಕ ದ್ವಿತೀಯ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಕ್ಕೆ ಸಿದ್ಧತೆ ನಡೆಸಲು ಇಂತಹ ಉಚಿತ ತರಬೇತಿ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಡಾ. ಶಿವಪ್ಪ ಭೂಸನೂರ ನಿರೂಪಿಸಿ, ರಾಜ್ ರೆಡ್ಡಿ ಪಾಟೀಲ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News