Kalaburagi | ಛಾಯಾಗ್ರಾಹಕರಿಗೆ ಕೆಪಿಎ ಆಸರೆ ಯೋಜನೆ: ಸದಸ್ಯತ್ವಕ್ಕೆ ಮನವಿ
ಕಲಬುರಗಿ: ಕರ್ನಾಟಕ ಛಾಯಾಚಿತ್ರ-ಗ್ರಾಹಕರ ಸಂಘದ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಸಂಘಗಳ ಸಹಯೋಗದೊಂದಿಗೆ ಛಾಯಾಗ್ರಾಹಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ‘ಕೆಪಿಎ ಆಸರೆ ಯೋಜನೆ’ ಜಾರಿಗೆ ತರಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ. ತೋಟದ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಘದ ಸದಸ್ಯರಾಗಿರುವ ಛಾಯಾಗ್ರಾಹಕರು ಯೋಜನೆಗೆ ಅರ್ಹರಾಗಿದ್ದು, 110 ರೂ. ಶುಲ್ಕ ಪಾವತಿಸಿ ಸದಸ್ಯತ್ವ ಪಡೆಯಬಹುದಾಗಿದೆ ಎಂದು ಹೇಳಿದರು.
ಯೋಜನೆಯಡಿ ಸದಸ್ಯರು ನಿಧನರಾದಲ್ಲಿ ಅವರ ನಾಮಿನಿಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ರಾಜ್ಯಾದ್ಯಂತ 10 ಸಾವಿರ ಛಾಯಾಗ್ರಾಹಕರನ್ನು ಯೋಜನೆಯಡಿ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಆಗಸ್ಟ್ 19ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಬಳಿಕ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಯೋಜನೆಯ ಅನುಷ್ಠಾನದ ಕುರಿತು ವಿವರಿಸಿದ ಅವರು, ಸದಸ್ಯರೊಬ್ಬರು ನಿಧನರಾದ ಸಂದರ್ಭದಲ್ಲಿ ಪ್ರತಿಯೊಬ್ಬ ಸದಸ್ಯರಿಂದ 10 ರೂ. ದೇಣಿಗೆ ಸಂಗ್ರಹಿಸಿ, ಮೃತರ ಕುಟುಂಬದ ನಾಮಿನಿಗೆ 12 ದಿನಗಳೊಳಗೆ ಚೆಕ್ ಮೂಲಕ 1 ಲಕ್ಷ ರೂ. ಸಹಾಯಧನ ತಲುಪಿಸಲಾಗುವುದು ಎಂದು ಹೇಳಿದರು.
ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಮೊ. ಅಪ್ಸರ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ 540 ಛಾಯಾಗ್ರಾಹಕರು ಸಂಘದ ಸದಸ್ಯರಾಗಿದ್ದಾರೆ. ಸದಸ್ಯರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ, ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿಯೂ ಸಂಘದಿಂದ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಶ್ರೀನಿವಾಸ ಮಡಕಿ, ಅನಿಲಕುಮಾರ, ಅಂಬದಾಸ, ಖಾಜಾ ಮೈನೋದಿನ್, ಆಕಾಶ ಪೂಜಾರಿ, ಚಂದ್ರಶೇಖರ ಬ್ಯಾಕೊಡ್, ಪ್ರಭುಲಿಂಗ, ನಾರಾಯಣ ಜೋಶಿ ಇದ್ದರು.