Kalaburagi | ಡ್ರೈನೇಜ್ ಕಾಮಗಾರಿ ಬಳಿಕ ಕೆಸರು ಗದ್ದೆಯಾದ ವಾರ್ಡ್ 41ರ ರಸ್ತೆ
ಇಕ್ಬಾಲ್ ಕಾಲೋನಿಯ ರಸ್ತೆ ಮರುನಿರ್ಮಾಣಕ್ಕೆ ಸ್ಥಳೀಯರ ಆಗ್ರಹ
ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 41ರ ಪ್ರಮುಖ ರಸ್ತೆ ಡ್ರೈನೇಜ್ ಕಾಮಗಾರಿ ಬಳಿಕ ದುರಸ್ತಿ ಕಾಣದೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದ ಇಕ್ಬಾಲ್ ಕಾಲೋನಿಯಲ್ಲಿ ನ್ಯಾಯವಾದಿಯೊಬ್ಬರ ಮನೆಯಿಂದ ಇಕ್ಬಾಲ್ ಖಾನ್ ಅವರ ಮನೆಯವರೆಗೆ ಡ್ರೈನೇಜ್ ಕಾಮಗಾರಿ ಕೈಗೊಳ್ಳುವ ವೇಳೆ ರಸ್ತೆ ಮತ್ತು ಚರಂಡಿಯನ್ನು ಅಗೆದು ಬಿಡಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಮರುನಿರ್ಮಾಣ ಮಾಡದ ಕಾರಣ ಸಂಪೂರ್ಣ ರಸ್ತೆ ಹಾಳಾಗಿದೆ.
ಇತ್ತೀಚಿನ ಮಳೆಯಿಂದ ರಸ್ತೆ ನೀರಿನಿಂದ ತುಂಬಿ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದು, ಸ್ಥಳೀಯ ನಿವಾಸಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ನಮಾಜ್‌ಗೆ ತೆರಳುವ ಸಾರ್ವಜನಿಕರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಭೀತಿಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಈ ಪ್ರದೇಶದಲ್ಲಿ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
“ಡ್ರೈನೇಜ್ ಕಾಮಗಾರಿ ಹೆಸರಿನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದಾಗ ರಸ್ತೆ ಕೆಸರಿನಿಂದ ತುಂಬಿ ಮನೆಗಳಿಂದ ಹೊರಬರಲು ಸಹ ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಿ ರಸ್ತೆ ದುರಸ್ತಿ ಮಾಡಿಸಬೇಕು,” ಎಂದು ಸ್ಥಳೀಯ ನಿವಾಸಿ ಇಕ್ಬಾಲ್ ಆಗ್ರಹಿಸಿದ್ದಾರೆ.
ಡ್ರೈನೇಜ್ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಳಂಬ ಮಾಡದೆ ರಸ್ತೆ ಮರುನಿರ್ಮಾಣ ಕೈಗೊಂಡು ಸಾರ್ವಜನಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಮಹಾನಗರ ಪಾಲಿಕೆ ಅಧಿಕಾರಿಗಳು, ವಾರ್ಡ್ ಸದಸ್ಯರು ಹಾಗೂ ಶಾಸಕರನ್ನು ಒತ್ತಾಯಿಸಿದ್ದಾರೆ.