ರಾಜ್ಯದ ಮೊದಲ ಪರಿಶಿಷ್ಟ ಜಾತಿ ನ್ಯಾಯವಾದಿಗಳ ಸಹಕಾರ ಸಂಘಕ್ಕೆ ಕಲಬುರಗಿಯಲ್ಲಿ ಚಾಲನೆ

ಯುವ ವಕೀಲರಿಗೆ ಆರ್ಥಿಕ ಬೆಂಬಲ, ವೃತ್ತಿ ಅಭಿವೃದ್ಧಿಗೆ ಸಹಕಾರ : ವಿದ್ಯಾರಾಣಿ ಭಟ್

Update: 2026-07-23 17:13 IST

ಕಲಬುರಗಿ: ರಾಜ್ಯದಲ್ಲೇ ಪ್ರಪ್ರಥಮವಾಗಿ ಸ್ಥಾಪನೆಯಾಗಿರುವ ಪರಿಶಿಷ್ಟ ಜಾತಿಯ ನ್ಯಾಯವಾದಿಗಳ ಸಹಕಾರ ಸಂಘ (ರಿ.) ಉದ್ಘಾಟನಾ ಸಮಾರಂಭವು ಗುರುವಾರ ಜಿಲ್ಲಾ ನ್ಯಾಯಾಲಯ ಆವರಣದ ನ್ಯಾಯವಾದಿಗಳ ಸಂಕೀರ್ಣದಲ್ಲಿ ನೆರವೇರಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯೆ ವಿದ್ಯಾರಾಣಿ ಭಟ್ ಹಾಗೂ ಕಲಬುರಗಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ. ಪಸಾರ್ ಅವರು ಸಂಘವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭವಾಗಿರುವ ಈ ಸಹಕಾರ ಸಂಘವು ಯುವ ವಕೀಲರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಕಾನೂನು ವೃತ್ತಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ನೆರವಾಗಲಿದೆ ಎಂದು ಹೇಳಿದರು.

ನ್ಯಾಯ ಕಾಪಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುವ ಈ ಸಂಘದ ಎಲ್ಲ ಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಆರ್ಯಜಿ ಸುಮನ ಭಿಕ್ಕುಣಿ ಅವರು ಹಿತೋಪದೇಶ ನೀಡಿ, ಸಮಾಜಮುಖಿ ಸೇವೆಯಲ್ಲಿ ನ್ಯಾಯವಾದಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಶ್ರೀಮಂತ ಶೀಲ್ಡ್, ಉಪಾಧ್ಯಕ್ಷೆ ಶಾರದಾ ಮರಮಕಲ್ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೈಯದ್ ಮಸ್ತಾನ್, ಜಿ.ಎ. ದೇಶಪಾಂಡೆ, ರಾಜು ಕೊರಳ್ಳಿ, ಕೆ.ಎ. ಕಲಬುರ್ಗಿ, ಜಿ.ಎಸ್. ಬಿರಾದರ್, ತೆಂಗಳಿ ಸೇರಿದಂತೆ ಹಲವು ನ್ಯಾಯವಾದಿಗಳು ಸಂಘದ ಚಟುವಟಿಕೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಸಂಜುಕುಮಾರ್ ಕಪೂರ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕನ್ನಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಜೀವ್ ಕುಮಾರ್ ಜಮಗಾಕರ್ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News