ಕಲಬುರಗಿ | ಸಂಸ್ಕೃತಿ ಉತ್ಸವದ ಯಶಸ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಗುತ್ತೇದಾರ
ಹರ್ಷಾನಂದ ಎಸ್. ಗುತ್ತೇದಾರ
ಕಲಬುರಗಿ : 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಸ್ವರ್ಣ ಜಯಂತಿ ಸಮಾರಂಭಕ್ಕೆ ಆಳಂದ ತಾಲೂಕಿನಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತರು, ಮಕ್ಕಳು, ಶಿಕ್ಷಕರು ಮಹಿಳೆಯರು ಪಾಲ್ಗೊಳ್ಳಬೇಕೆಂದು ವಿಕಾಸ ಅಕಾಡೆಮಿಯ ಜಿಲ್ಲಾ ಸಂಚಾಲಕ ಹರ್ಷಾನಂದ ಎಸ್. ಗುತ್ತೇದಾರ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜ.29ರಿಂದ ಫೆ.6 ರವರೆಗೆ ಸೇಡಂ ರಸ್ತೆಯಲ್ಲಿರುವ ಬಿರನಹಳ್ಳಿ ಕ್ರಾಸ್ನ ಪ್ರಕೃತಿ ನಗರದಲ್ಲಿ ಜರುಗಲಿರುವ ಐತಿಹಾಸಿಕ ಸಮಾರಂಭದಲ್ಲಿ ದಿನನಿತ್ಯ ವಿಶಿಷ್ಟವಾದ ಕಾರ್ಯಕ್ರಮಗಳು ಜರಗಲಿವೆ. ಉದ್ಘಾಟನಾ ಸಮಾರಂಭ, ಮಾತೃ ಸಮಾವೇಶ, ಕೈತುತ್ತು ಭೋಜನ, ಜಾದು ಪ್ರದರ್ಶನ ಯುವ, ಸಮಾವೇಶ, ಗ್ರಾಮ ಕೃಷಿ ಸಮಾವೇಶ, ಆಹಾರ ಆರೋಗ್ಯ ಸಮಾವೇಶ, ಸ್ವಯಂ ಉದ್ಯೋಗ ಸಮಾವೇಶ, ಪ್ರಕೃತಿ ಮತ್ತು ನಾವು ಸಮಾವೇಶ, ಸಂಸ್ಕೃತಿ ಸಮಾವೇಶ, ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಈಗಾಗಲೇ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಕನ್ನಡ, ಹಿಂದಿ ಮತ್ತು ಆಂಗ್ಲ್ ಭಾಷೆಗಳಲ್ಲಿ ಮುದ್ರಿತವಾಗಿರುವ ಆಹ್ವಾನ ಪತ್ರಿಕೆಗಳು ಎಲ್ಲರಿಗೂ ತಲುಪಿವೆ. ಈ ಉತ್ಸವವು ದಕ್ಷಿಣ ಭಾರತದ ಕುಂಭಮೇಳವಾಗಲಿದೆ ಅಲ್ಲದೇ ಈ ಉತ್ಸವದಲ್ಲಿ 50 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದ ಯಶಸ್ಸಿಗಾಗಿ ಅನೇಕ ಸಮಿತಿಗಳನ್ನು ರಚನೆ ಮಾಡಿ ಕಾರ್ಯನ್ಮೊಖರಾಗಿದ್ದೇವೆ. ಹಿರಿಯ ಚಿಂತಕರಾದ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಇತಿಹಾಸದಲ್ಲಿ ಈ ಕಾರ್ಯಕ್ರಮ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಪ್ರತಿನಿತ್ಯ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.
ಐತಿಹಾಸಿಕ ಸಮಾರಂಭಕ್ಕೆ ಆಳಂದ ತಾಲೂಕಿನಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಐತಿಹಾಸಿಕ ಕಾರ್ಯಕ್ರಮ ಮಾಡಬೇಕು ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲರೂ ಕಾರಣಿಭೂತರಾಗಿ ಸಾಕ್ಷಿಗಳಾಗಬೇಕು ಎಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ರೈತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮದ ಸೊಬಗನ್ನು ಆನಂದಿಸಬೇಕು ಎಂದು ತಿಳಿಸಿದ್ದಾರೆ.