Kalaburagi | ಸಾಮಾಜಿಕ ಭದ್ರತಾ ಮಾಸಾಶನ ವಿಳಂಬ ಖಂಡಿಸಿ ಬೃಹತ್ ಪ್ರತಿಭಟನೆ
ಕಲಬುರಗಿ: ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳು ಹಾಗೂ ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಅಂಗವಿಕಲರು, ವಯೋವೃದ್ಧರು, ವಿಧವೆಯರು ಹಾಗೂ ನಿರ್ಗತಿಕರಿಗೆ ದೊರೆಯಬೇಕಾದ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ಹಲವು ತಿಂಗಳುಗಳಿಂದ ಬಾಕಿ ಉಳಿದಿರುವುದನ್ನು ಖಂಡಿಸಿ, ಮೂಲನಿವಾಸಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವ ಅನೇಕ ಅರ್ಹ ಫಲಾನುಭವಿಗಳ ಅರ್ಜಿಗಳು ಪರಿಶೀಲನೆ, ದಾಖಲೆಗಳ ಕೊರತೆ ಹಾಗೂ ಆಡಳಿತಾತ್ಮಕ ವಿಳಂಬದಿಂದ ಹಲವು ತಿಂಗಳುಗಳಿಂದ ಬಾಕಿ ಉಳಿದಿವೆ. ಇದರಿಂದ ಮಾಸಾಶನವನ್ನೇ ಜೀವನಾಧಾರವಾಗಿಸಿಕೊಂಡಿರುವ ಬಡವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ವಯೋವೃದ್ಧರು ಹಾಗೂ ಅಂಗವಿಕಲರು ಗ್ರಾಮ ಪಂಚಾಯಿತಿ, ನಾಡಕಚೇರಿ ಮತ್ತು ತಹಶೀಲ್ದಾರ್ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲು ವಿಶೇಷ ಮಾಸಾಶನ ಶಿಬಿರಗಳನ್ನು ಆಯೋಜಿಸಬೇಕು. ಹಲವು ತಿಂಗಳಿಂದ ಬಾಕಿ ಇರುವ ಮಾಸಾಶನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆಲವು ಪ್ರಕರಣಗಳಲ್ಲಿ ಅರ್ಜಿದಾರರು ಕೋರಿದ ಯೋಜನೆಯ ಬದಲಿಗೆ ಬೇರೆ ಯೋಜನೆಯಡಿ ಮಂಜೂರಾತಿ ಪತ್ರ ನೀಡಲಾಗಿದೆ ಹಾಗೂ ಒಂದೇ ಯೋಜನೆಯಡಿ ಈಗಾಗಲೇ ಮಾಸಾಶನ ಪಡೆಯುತ್ತಿರುವವರಿಗೆ ಮತ್ತೊಮ್ಮೆ ಮಂಜೂರಾತಿ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅರ್ಹ ಹಾಗೂ ತಿರಸ್ಕೃತ ಅರ್ಜಿಗಳ ವಿವರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ತಿರಸ್ಕೃತ ಅರ್ಜಿಗಳಿಗೆ ಕಾರಣವನ್ನು ಲಿಖಿತವಾಗಿ ತಿಳಿಸಬೇಕು. ಅರ್ಜಿಯ ಸ್ಥಿತಿಯನ್ನು ಎಸ್‌ಎಂಎಸ್ ಅಥವಾ ಅಧಿಕೃತ ಮಾಹಿತಿ ವ್ಯವಸ್ಥೆಯ ಮೂಲಕ ತಿಳಿಸುವ ವ್ಯವಸ್ಥೆ ಕಲ್ಪಿಸಬೇಕು. ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾರುತಿ ಗಂಜಗಿರಿ, ಚಂದ್ರಕಾoತ ಬಾಗಲಕೋಟ, ಪಾರ್ವತಿ ಚಂದಾಪೂರ, ಸಂಗೀತಾ, ಮೋಹನ ಐನಾಪೂರ, ಮಾರುತಿ ಜಾಧವ್, ಹೀರಾಸಿಂಗ್ ಪವಾರ್, ಮಹೇಶ್ ಕುಸರಂಪಳ್ಳಿ, ಅಮರನಾಥ ಹೂವಿನಭಾವಿ, ಮಹೇಶ್ ರಾಣಾಪೂರ, ಲಕ್ಷ್ಮೀಕಾಂತ ರಾಣಾಪೂರ, ಪ್ರಕಾಶ್ ಭಕ್ತಂಪಳ್ಳಿ, ಮಲ್ಲಿಕಾರ್ಜುನ್ ಕೊಡದೂರು, ಹರೀಶ್ ದೆಗಲಮಡಿ, ಹರ್ಷವರ್ಧನ್ ಹಿಂದಿನಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.