ಕಲಬುರಗಿ | ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ, ಸಮುದಾಯದ ಸಹಸ್ರಾರು ಜನರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿದ ಬಳಿಕ ಕೋಲಿ, ಕಬ್ಬಲಿಗ ಸಮಾಜಗಳ ಪ್ರಮುಖ ಮುಖಂಡರುಗಳ ನೇತೃತ್ವದಲ್ಲಿ ಹಾವೇರಿಯ ಶಾಂತಬಿಷ್ಮ ಚೌಡಯ್ಯ ಸ್ವಾಮೀಜಿ ಅವರು ಧ್ವಜ ತೋರಿಸುವುದರ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.
ಜಗತ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತನಕ ನಡೆಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕ್ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ 1996ರಿಂದ ಒತ್ತಾಯಿಸುತ್ತಾ ಬಂದಿದ್ದೇವೆ, ಹಲವು ಬಾರಿ ಗಂಗಾಮತ ಮತ್ತು ಅದರ ಉಪಜಾತಿಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿದ್ದರೂ ಪದೇ ಪದೇ ವಾಪಸ್ ಕಳುಹಿಸಲಾಗುತ್ತಿದೆ, ಹಾಗಾಗಿ ಈ ಬಾರಿ ಸೂಕ್ತ ದಾಖಲೆಗಳೊಂದಿಗೆ ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಕೋಲಿ ಸಮಾಜದ ಮುಖಂಡ ಶಿವಕುಮಾರ್ ನಾಟೀಕಾರ ಮಾತನಾಡಿ, ನಮ್ಮ ಹೋರಾಟ ಯಾವುದೇ ಸರಕಾರ, ಪಕ್ಷದ ವಿರುದ್ಧವಲ್ಲ. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಹಮ್ಮಿಕೊಂಡಿದ್ದು, ಇಲ್ಲಿ ಭಾಗಿಯಾದರು ಸ್ವಾಭಿಮಾನಿಗಳಾಗಿದ್ದಾರೆ ಹೊರತು ಪೇಮೆಂಟ್ ಗಿರಾಕಿಗಳಲ್ಲ ಎಂದು ವಾಗ್ದಾಳಿ ನಡೆಸಿದರು.
1996 ರಿಂದ ನಮ್ಮ ಪ್ರಸ್ತಾವನೆ ವಾಪಸ್ ಬರುತ್ತಿದೆ, ಮತ್ತೆ ಸರ್ಕಾರ ಪ್ರಸ್ತಾವನೆ ಸಲ್ಲಿಸಬೇಕಿದೆ, 2 ವರ್ಷ ಆದರೂ ಅಹಿಂದ ಸರ್ಕಾರ ಎನಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಲ್ಲಿ ಎಡವಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದಾರೆ, ನಮ್ಮ ಬೇಡಿಕೆ ಅವರೇ ಪೂರೈಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಾವೇರಿಯ ಶಾಂತಬಿಷ್ಮ ಚೌಡಯ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಸಾಬಣ್ಣ ಜಮಾದಾರ್, ಶರಣಪ್ಪ ತಳವಾರ, ಶೋಭಾ ಬಾಣಿ, ರವಿರಾಜ್ ಕೊರವಿ, ತಿಪ್ಪಣ್ಣ ರೆಡ್ಡಿ, ಪಿಡ್ಡಪ್ಪ ಜಾಲಗಾರ್, ಭಗವಂತರಾಯ ಬೆಣ್ಣೂರ, ವಿದ್ಯಾಧರ ಮಂಗಳೂರು, ದಿಗಂಬರ ಕರಜಗಿ, ಭೀಮರಾಯ ಜನಿವಾರ, ಸುರೇಶ್ ಹುಡಗಿ, ಲಕ್ಷ್ಮೀಪುತ್ರ ಜಮಾದಾರ್, ರಾಕೇಶ್ ಜಮಾದಾರ್, ಮಹಾಂತೇಶ್ ಜಮಾದಾರ್, ಸೇರಿದಂತೆ ಮತ್ತಿತರರು ಇದ್ದರು.
ಯಾದಗಿರಿಯ, ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಜೇವರ್ಗಿ, ಚಿತ್ತಾಪುರ, ಚಿಂಚೋಳಿ, ಕಾಳಗಿ ಸೇರಿದಂತೆ ವಿವಿಧ ತಾಲೂಕುಗಳ ಗ್ರಾಮಗಳಿಂದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು.