ಕಲಬುರಗಿ | ದೇಶದಲ್ಲಿ ಎಲ್ಲರೂ ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು : ರಾಬರ್ಟ್ ಮಿರಾಂಡಾ
ಕ್ರಿಸ್ತ ಜಯಂತಿ, ಹೊಸ ವರ್ಷದ ಅಂತರ್ ಧರ್ಮೀಯ ಆಚರಣೆ
ಕಲಬುರಗಿ: ಇಂಟರ್ ರಿಲಿಜಿಯಸ್ ಫೋರಂ ಫಾರ್ ಪೀಸ್ ಆ್ಯಂಡ್ ಹಾರ್ಮನಿ ವತಿಯಿಂದ ನಗರದ ಸೇಂಟ್ ಮೇರಿ ಚರ್ಚ್ ನಲ್ಲಿರುವ ಸಭಾಂಗಣದಲ್ಲಿ ರವಿವಾರ ಸಂಜೆ ಕ್ರಿಸ್ತ ಜಯಂತಿ ಹಾಗೂ ಹೊಸ ವರ್ಷದ ಅಂತರ್ ಧರ್ಮೀಯ ಆಚರಣೆ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲಬುರಗಿ ವಲಯದ ಧರ್ಮಾಧ್ಯಕ್ಷರಾದ ರಾಬರ್ಟ್ ಮಿರಾಂಡಾ ಅವರು ಮಾತನಾಡಿ, ದೇಶದ ವಿವಿಧೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಅಹಿತಕರ ಘಟನೆಗಳು ನಡೆದಿರುವುದು ದುಃಖಕರ. ನಮ್ಮ ದೇಶದಲ್ಲಿ ಎಲ್ಲರೂ ಪ್ರೀತಿ, ಶಾಂತಿ, ಸೌಹಾರ್ದತೆಯಿಂದ ಬದುಕಬೇಕು ಎಂದು ಸಂದೇಶ ರವಾನಿಸಿದರು.
ಯೇಸು ಅವರು ತಮ್ಮ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಯೇಸುವನ್ನು ನೆನೆಸುವ ಕ್ರಿಸ್ ಮಸ್ ಹಬ್ಬದ ಆಚರಣೆಗಳಲ್ಲಿ ಅಡ್ಡಿಪಡಿಸಿರುವುದು ಕಪ್ಪು ಚುಕ್ಕೆ ಎಂದರು.
ನಿಜವಾದ ಧರ್ಮೀಯರು ಆಗಿದ್ದರೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ. ಇಂತಹ ನಡೆಗಳ ಬಗ್ಗೆ ಸರ್ಕಾರದ ಸಚಿವರು, ಅಧಿಕಾರಿಗಳು ಕ್ರಮ ವಹಿಸಿ, ಮುಂದಿನ ದಿನಗಳಲ್ಲಿ ಸೌಹಾರ್ದತೆಯಿಂದ ಬದುಕುವ ಸಂದೇಶ ಸಾರಬೇಕು. ನಾವೆಲ್ಲರೂ ದೇವರನ್ನು ಪ್ರೀತಿಸುವವರು ಆಗಿದ್ದೇವೆ. ಪ್ರೀತಿ, ಶಾಂತಿ, ಸೌಹಾರ್ದತೆ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲ ಧರ್ಮಗಳು ಪ್ರೀತಿ, ದಯೆ, ಕರುಣೆ ಹಾಗೂ ಸೇವೆಯ ಕುರಿತಾಗಿ ಹೇಳುತ್ತವೆ. ಇಂದು ಹಬ್ಬ ಆಚರಣೆ ಮಾಡುವಾಗ ದೇವರನ್ನು ಸಾಕ್ಷ್ಯಾತ ಯಾರು ನೋಡಿಲ್ಲ. ಎಲ್ಲವನ್ನೂ ಪ್ರೀತಿಸುವ ದೇವರು ಪ್ರೀತಿಯನ್ನು ಸಾಕ್ಷಿಯಾಗಿಸಲು ಯೇಸು ಜನಿಸಿದರು ಎಂದರು.
ಇಂದು ಸರ್ವಧರ್ಮೀಯ ಮುಖಂಡರು ಸೇರಿ ಕ್ರಿಸ್ ಮಸ್ ಹಬ್ಬ ಆಚರಿಸುತ್ತಿರುವುದು ಕಲಬುರಗಿ ಜಿಲ್ಲೆಯ ಸೌಹಾರ್ದತೆ ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೊನ್ನ ವಿರಕ್ತ ಮಠದ ಶಿವಾನಂದ ಸ್ವಾಮಿಗಳು, ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿದರು.
ಮಳಖೇಡ ದರ್ಗಾದ ಸಜ್ಜಾದೆ ಸೈಯದ್ ಮುಸ್ತಾಫಾ ಖಾದ್ರಿ, ಬಸವಕಲ್ಯಾಣದ ಬಂತೆ ಧಮ್ಮ ಗೌತಮ, ಸುಮನ್ ಸರಡಗಿ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಕಲಬುರಗಿ ಗುರುದ್ವಾರದ ದೀಪಸಿಂಗ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ್ವರ, ಡಾ.ಉದಯ್ ಪಾಟೀಲ್, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಪ್ರಗತಿಪರ ಅಭಿವೃದ್ಧಿ ಸಮಿತಿ ಲೂಯಿಸ್ ಕೋರಿ, ಮೆರಾಜ್ ಪಟೇಲ್, ಖಾಜಿ ರಿಜ್ವಾನ್ ಸಿದ್ದಿಕಿ, ಗುರುಪ್ರೀತ್ ಸಿಂಗ್, ಅರುಣಕುಮಾರ್ ಲೋಯಾ, ಇಕ್ಬಾಲ್ ಅಲಿ, ನಜೀರ್ ಮುತವಲ್ಲಿ, ಅಸ್ಲಾಂಖಾನ್, ಏಜಾಜ್ ಖಾನ್, ಮಸ್ತಾನ್ ಬಿರಾದಾರ, ಸೂರ್ಯಕುಮಾರ್, ಜಗದೀಶ್, ಬಿ.ಎಂ.ರಾವೂರ, ಲಕ್ಷ್ಮೀಕಾಂತ ಹುಬ್ಬಳ್ಳಿ, ಲೋಹಿತ್ ವಿಶ್ವಕರ್ಮ, ಸಾಜಿದ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೇಂಟ್ ಮೇರಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.