×
Ad

ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ : ಸುಭಾಷ್ ರಾಠೋಡ್

Update: 2025-05-26 17:39 IST

ಕಲಬುರಗಿ : ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ, ಎಂಬಂತೆ ಚಿಂಚೋಳಿ ಶಾಸಕ ಡಾ.ಅವಿನಾಶ್‌ ಜಾಧವ್‌ ಅವರು ತಮ್ಮ ತಟ್ಟೆಯಲ್ಲಿ ಕೋಣ ಮಲಗಿದ್ದರೂ ಬೇರೆಯವರ ತಟ್ಟೆಯಲ್ಲಿನ ನೋಣ ತೆಗೆಯಲು ಹೋಗುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಹೇಳಿದರು.

ಕೆಡಿಪಿ ಸಭೆ ಎನ್ನುವುದರ ಬಗ್ಗೆ ಗಂಧ ಗಾಳಿ ಗೊತ್ತಿದ್ದರೆ ಇಲ್ಲಿವರೆಗೆ ಶಾಸಕರು ಚಿಂಚೋಳಿಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯ ಚಿಂತನೆ ಮಾಡಿ ಮುಂದೆ ಕ್ಷೇತ್ರಕ್ಕೆ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ನೀಲಿನಕ್ಷೆ ಸಿದ್ದಪಡಿಸಿ ಸಂಬಂಧ ಪಟ್ಟ ಸಚಿವರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸುವಲ್ಲಿ ನಿರತರಾಗಿರುತ್ತಿದ್ದರು. ಅದೆಲ್ಲ ಬಿಟ್ಟು ತನ್ನ ಹುಳುಕನ್ನು ಮುಚ್ಚಿಕೊಳ್ಳಲಿಕ್ಕೆ ಖರ್ಗೆ ಅವರನ್ನು ದೂಷಿಸುವುದು ಖಂಡನೀಯ. ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಎಚ್ಚರಿಸಿದ್ದಾರೆ.

ಒಂದು ವರ್ಷದಿಂದ ಕೆಡಿಪಿ ಸಭೆ ಮಾಡದ ಶಾಸಕರು ಉಸ್ತುವಾರಿ ಸಚಿವರ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಗೆ ಇಟ್ಟುಕೊಳ್ಳುವುದು ಒಳಿತು, ಚಿಂಚೋಳಿ ಶಾಸಕರಾಗಿ ತಾವು ಸಾಧಿಸಿದ ಕೆಲಸಗಳು ಕ್ಷೇತ್ರದ ಜನ ನೋಡ್ತಾ ಇದ್ದಾರೆ. ಚಿಂಚೋಳಿಗೆ ನಿಮ್ಮ ಮತ್ತು ಬಿಜೆಪಿಯ ಕೊಡುಗೆ ಶೂನ್ಯ. ತಾವು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ತೆಗೆದುಕೊಂಡು ಹೋಗಿರುವುದು ನಿಮ್ಮ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News