×
Ad

ಕಲಬುರಗಿ | ʼಪ್ರಬುದ್ಧ ಅಕಾಡೆಮಿʼ ಸ್ಪರ್ಧಾತ್ಮಕ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2026-01-01 07:22 IST

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿ ನಗರದ ಹೊರವಲಯದ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಕೆ.ಕೆ.ಆರ್.ಡಿ.ಬಿ. ಅನುದಾನದಡಿ ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರೀಕ್ಷಾ ಪೂರ್ವ ಉಚಿತ ತರಬೇತಿ ಕೇಂದ್ರ "ಪ್ರಬುದ್ಧ ಅಕಾಡೆಮಿ"ಗೆ‌ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಸ್ಥಳ ಪರಿಶೀಲಿಸಿದರು.

ಸುಮಾರು 10,449,35 ಚ.ಮೀ ವಿಸ್ತೀರ್ಣ ಹೊಂದಿರುವ "ಪ್ರಬುದ್ಧ ಅಕಾಡೆಮಿ" ತರಬೇತಿ ಕೇಂದ್ರವು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಸುವ ಗುರಿಯೊಂದಿಗೆ ಉಚಿತ ಮತ್ತು ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶ ಹೊಂದಿದ್ದು,‌ ಶೀಘ್ರವೆ ಕೇಂದ್ರ ಆರಂಭಕ್ಕೆ‌ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.

ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನಡೆಯುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉದ್ದೇಶದೊಂದಿಗೆ "ಪ್ರಬುದ್ಧ ಅಕಾಡೆಮಿ"ಯನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ವಾರ್ಷಿಕ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜಿಸಿದ್ದು, ಮುಂದಿನ ದಿನದಲ್ಲಿ ಈ ಸಂಖ್ಯೆ ಹೆಚ್ಚಿಸಿ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಡಿ.ಸಿ. ಬಿ.ಫೌಝಿಯಾ ತರನ್ನುಮ್ ತಿಳಿಸಿದರು.

ಈ ಕೇಂದ್ರವು ಆಧುನಿಕ ತಂತ್ರಜ್ಞಾನದೊಂದಿಗೆ 125 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ ನಾಲ್ಕು ವಿಶಾಲವಾದ ತರಬೇತಿ ಕೊಠಡಿಗಳನ್ನು ಹೊಂದಿದೆ. ಅಂದಾಜು 100 ವಿದ್ಯಾರ್ಥಿ ಸಾಮರ್ಥ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ ಎಲ್ಲಾ ಪುಸ್ತಕಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯ, ಆಡಳಿತ ವಿಭಾಗ, ಡಿಜಿಟಲ್ ಲೈಬ್ರರಿ, ಮೆಂಟರಿಂಗ್ ಕೊಠಡಿಗಳು, ಸ್ವ-ಅಧ್ಯಯನಕ್ಕಾಗಿ ಕ್ಯುಬಿಕಲ್ಸ್ ಸೌಲಭ್ಯ ಇದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಉಪಹಾರ ಕೇಂದ್ರ ಹಾಗೂ ಉತ್ತಮ ಪರಿಸರದ ವಾತಾವರಣ ಇಲ್ಲಿ ಕಲ್ಪಿಸಲಾಗಿದೆ.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸೋಮಶೇಖರ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಂಗಮೇಶ, ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತ ಸೌರಭ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News