Kalaburagi | ಮೋಟಾರ್ ಪಂಪ್ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಕಲಬುರಗಿ: ಚಿತ್ತಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೋಟಾರ್ ಪಂಪ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ ಸುಮಾರು 60 ಸಾವಿರ ರೂ. ಮೌಲ್ಯದ ಮೂರು ಮೋಟಾರ್ ಪಂಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ತಾಪೂರದ ಆಶ್ರಯ ಕಾಲೋನಿ ನಿವಾಸಿಗಳಾದ ಮಂಜುನಾಥ ಅಲಿಯಾಸ್ ಅಂಜನೇಯ ಚಿಂದಪ್ಪ ಹೇಳವಾರ (30) ಹಾಗೂ ಭೀಮಣ್ಣ ರಾಮಪ್ಪ ಹೇಳವಾರ (38) ಬಂಧಿತ ಆರೋಪಿಗಳಾಗಿದ್ದಾರೆ.
ಚಿತ್ತಾಪೂರದ ಸಂತೋಷನಗರ ನಿವಾಸಿ ಸೈಯದ್ ನಾಸೀರ್ ಬಶೀರಮಿಯಾ ನಂದಿಯಾಳ ಅವರು ಜುಲೈ 2ರಂದು ತಮ್ಮ ಪಂಪ್‌ಸೆಟ್‌ನಲ್ಲಿದ್ದ ಮೂರು 3 ಎಚ್‌ಪಿ ಮೋಟಾರ್ ಪಂಪ್‌ಗಳು ಕಳುವಾಗಿವೆ ಎಂದು ದೂರು ನೀಡಿದ್ದರು. ಈ ಸಂಬಂಧ ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹಾಗೂ ಚಿತ್ತಾಪೂರ ವೃತ್ತದ ಸಿಪಿಐ ಎಸ್.ಸಿ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಏಳು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ತನಿಖೆಯ ವೇಳೆ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕಳುವಾಗಿದ್ದ ಮೂರು 3 ಎಚ್‌ಪಿ ಮೋಟಾರ್ ಪಂಪ್‌ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮುದ್ದೆಮಾಲಿನ ಒಟ್ಟು ಮೌಲ್ಯ ಸುಮಾರು 60 ಸಾವಿರ ರೂ. ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.