ಕಲಬುರಗಿ | ಹತ್ಯೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಕಲಬುರಗಿ : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ದೊಡ್ಡಪ್ಪನ ಪುತ್ರಿಯನ್ನು ಕೊಲೆ ಮಾಡಿದ ಆರೋಪಿಗೆ ಕಲಬುರಗಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಸೇಡಂ ಸಂತೆಯಲ್ಲಿ ಶರಭಾವತಿ ಎಂಬಾಕೆಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಕಾಳಗಿ ತಾಲ್ಲೂಕಿನ ಕೊಡದೂರು ಗ್ರಾಮದ ದಿನೇರ್ಶ ನಾಗೇಂದ್ರಪ್ಪ ಎಂಬಾತನೇ ಶಿಕ್ಷೆಗೆಗೊಳಗಾದ ಅಪರಾಧಿ.
ದ್ವಿಚಕ್ರವಾಹನದ ಮೇಲೆ ಬಂದ ದಿನೇಶ್ ಹರಿತವಾದ ಆಯುಧದಿಂದ ಶರಭಾವತಿಯ ಕತ್ತು ಕೊಯ್ದು ಪರಾರಿಯಾಗಿದ್ದ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಗೆ ಆಸ್ತಿ ವಿವಾದಕ್ಕೆ ಕೊಲೆ ಮಾಡಿದ್ದು ಎಂದು ತನಿಕೆಯಲ್ಲಿ ತಿಳಿದುಬಂದಿದ್ದು, ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಪಿಐ ಹಾಗೂ ಹಾಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹಾಗೂ ಸಿಪಿಐ ಪಸಿಯೊದ್ದೀನ್ ಅವರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಾದ- ಪ್ರತಿವಾದ ಆಲಿಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಕರಣ ಗುಜ್ಜರ್ ಅವರು ಅಪರಾಧಿ ದಿನೇಶಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಸರ್ಕಾರದ ಪರವಾಗಿ 4ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ನಾಗರಾಜ್ ಕಳ್ಳಿಮನಿ ಮಸ್ಕಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು.