Aland | ಎಸ್‌ಐಆರ್ ಪ್ರಕ್ರಿಯೆ ಜವಾಬ್ದಾರಿಯಿಂದ ಪೂರ್ಣಗೊಳಿಸಿ: ಡಾ.ಫಾರುಕ್ ಮಣ್ಣೂರ
ಎಸ್‌ಐಆರ್ ಜಾಗೃತಿ ಸಭೆ
ಆಳಂದ, ಜು. 6: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರತಿಯೊಬ್ಬ ನಾಗರಿಕರು ಜವಾಬ್ದಾರಿಯಿಂದ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಕಲಬುರಗಿಯ ಮಣ್ಣೂರ ಆಸ್ಪತ್ರೆಯ ಸ್ಥಾಪಕ ಹಾಗೂ ಸಮಾಜಸೇವಕ ಡಾ. ಫಾರುಕ್ ಮಣ್ಣೂರ ಕರೆ ನೀಡಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಎಸ್‌ಐಆರ್ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ, ಎಸ್‌ಐಆರ್ ಅರ್ಜಿ ಭರ್ತಿ ವಿಧಾನ, ಅಗತ್ಯ ದಾಖಲೆಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೇವಲ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಲಾಗುತ್ತಿದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮತದಾರರು ಎಸ್‌ಐಆರ್ ಅರ್ಜಿಯನ್ನು ಸ್ವತಃ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. ತಮ್ಮ ಹೆಸರಿನ ಜೊತೆಗೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾರೊಬ್ಬರ ಹೆಸರೂ ಅನಗತ್ಯವಾಗಿ ಕೈಬಿಡದಂತೆ ಜಾಗೃತಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಅರ್ಜಿ ಭರ್ತಿ ಮಾಡುವ ಜವಾಬ್ದಾರಿಯನ್ನು ಇತರರ ಮೇಲೆ ಹಾಕದೆ, ಸ್ವತಃ ಪರಿಶೀಲಿಸಿ ಸಲ್ಲಿಸಬೇಕು. ಹೆಸರು, ಜನ್ಮ ದಿನಾಂಕ, ವಿಳಾಸ ಹಾಗೂ ಕುಟುಂಬದ ವಿವರಗಳಲ್ಲಿ ಯಾವುದೇ ತಪ್ಪು ಕಂಡುಬಂದರೆ ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿಂದೆ ಜಾಗೃತಿಯ ಕೊರತೆ ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳಿಂದ ಹಲವಾರು ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿರುವ ಉದಾಹರಣೆಗಳಿವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಎಸ್‌ಐಆರ್ ಅರ್ಜಿ ಭರ್ತಿ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಡಾ. ಮಣ್ಣೂರ, “ಎಸ್‌ಐಆರ್ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲ; ಈ ಪ್ರಕ್ರಿಯೆಯನ್ನು ಪ್ರತಿಯೊಬ್ಬರೂ ಜಾಗೃತಿಯಿಂದ ಹಾಗೂ ಜವಾಬ್ದಾರಿಯಿಂದ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
ಸಭೆಯಲ್ಲಿ ನಿವೃತ್ತ ತಹಶೀಲ್ದಾರ್ ಸೈಯದ್ ನಿಸಾರ್ ವಜೀರ್, ಇಕ್ಬಾಲ್ ಸಾಹೇಬ್, ಹಿದಾಯತ್ ಅಲಿ, ಜಾಕೀರ್, ರಫೀಕ್ ಇನಾಮದಾರ್, ಮೊಹಸಿನ್ ಗುತ್ತೇದಾರ್, ಸಯ್ಯದ್ ಯೂಸುಫ್ ಖಾಜಿ, ಯೂನಸ್ ಬಾಗ್ಬಾನ್, ಸಯ್ಯದ್ ಜಾಕಿರ್ ಅಹ್ಮದ್, ಅಜ್ಗರ್ ಅಲಿ ಹವಾಲ್ದಾರ, ತಯ್ಯಬ್ ಶೇಖ, ಮಶಾಕ್, ಮೊಹಮ್ಮದ್ ಹುಸೇನ್ ನಾಯ್ಕವಾಡಿ, ಪಾಶಾ ಗುತ್ತೇದಾರ, ಅಬ್ದಲ್ ಖಾದರ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.